Advertisement

ಕುಸಿಯುವ ಭೀತಿ: ಕಾಂತಮಂಗಲ ಸೇತುವೆಗೆ ಬೇಕು ಕಾಯಕಲ್ಪ

05:07 PM Nov 13, 2017 | Team Udayavani |

ಬೆಳ್ಳಾರೆ: ಕಾಂತಮಂಗಲ ಸೇತುವೆ ನಾದುರಸ್ತಿ ಯಲ್ಲಿದ್ದು, ಕುಸಿಯುವ ಭೀತಿಯಲ್ಲಿದೆ. ಈ ಸೇತುವೆಯನ್ನು ಪಯಸ್ವಿನಿ ಹೊಳೆಗೆ ಅಜ್ಜಾವರ, ಮಂಡೆಕೋಲು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು 34 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಾಸರಗೋಡು ಜಿಲ್ಲೆಗೂ ಸಂಪರ್ಕ ಕಲ್ಪಿಸುತ್ತಿರುವ ಕಾರಣ, ಅಂತಾರಾಜ್ಯ ಸೇತುವೆಯಾಗಿ ಸೇತುವೆ ಗಮನ ಸೆಳೆದಿದೆ.

Advertisement

ಸೇತುವೆ ಸುಮಾರು 75 ಮೀಟರ್‌ ಉದ್ದವಿದ್ದು, ಇದರ ಪಿಲ್ಲರ್‌ಗಳು ಸುಮಾರು 30 ಅಡಿ ಎತ್ತರವಿವೆ.  ವಾಹನಗಳು ಚಲಿಸುವಾಗ ಸೇತುವೆ ಅಲ್ಲಾಡುತ್ತಿದ್ದು, ಪ್ರಯಾಣಿಕರು ಜೀವಭಯದಲ್ಲೇ ಸೇತುವೆ ದಾಟುತ್ತಾರೆ  ಸೇತುವೆಗಳ ತಳಭಾಗ ನೀರಿನ ಹೊಡೆತಕ್ಕೆ ಸವೆದಿದ್ದು, ಸೇತುವೆ ಕೆಳಭಾಗದ ಸ್ಲ್ಯಾಬ್  ಕೂಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅವುಗಳಿಂದ ಪದರಗಳು ಉದುರುತ್ತಿವೆ. ಇದರಿಂದಾಗಿ, ಸ್ಲ್ಯಾಬ್ ಗ ಅಳವಡಿಸಲಾದ ಕಬ್ಬಿಣದ ಸರಳುಗಳು ಕಾಣುತ್ತಿದ್ದು, ತುಕ್ಕು ಹಿಡಿದು ಅವುಗಳ ಗಾತ್ರ ಕಿರಿದಾಗಿದೆ. ಸೇತುವೆಯ ಮೇಲ್ಭಾಗದ ರಸ್ತೆಯೂ ಹೊಂಡ – ಗುಂಡಿಗಳಿಂದ ಕೂಡಿದ್ದು, ವಾಹನಗಳು ಸರಾಗವಾಗಿ ಸಂಚರಿಸಲು ತೊಡಕಾಗುತ್ತಿದೆ.

ಸಂಪರ್ಕಕ್ಕೆ ಈ ಸೇತುವೆ ಅತ್ಯಂತ ಮಹತ್ವದ್ದಾಗಿದ್ದು, ಒಂದೊಮ್ಮೆ ಕುಸಿದರೆ ಸುಳ್ಯ ತಾಲೂಕಿನ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದವರು, ಕಾಸರಗೋಡು ಭಾಗದವರು ಸಂಪರ್ಕ ಕಳೆದುಕೊಳ್ಳುತ್ತಾರೆ. ಮಂಡೆಕೋಲು, ಅಜ್ಜಾವರ ಭಾಗದಿಂದ ಶಾಲೆ, ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವ್ಯವಹಾರ, ಕಚೇರಿ ಕೆಲಸದ ದೃಷ್ಟಿಯಿಂದ ಅನೇಕ ಜನರು ಸುಳ್ಯ ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. ಕಾಂತಮಂಗಲ ಸೇತುವೆ ಅಜ್ಜಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟಿದ್ದು, ರಸ್ತೆ ಜಿಲ್ಲಾ ಪಂಚಾಯತ್‌ಗೆ ಸೇರಿದ್ದಾಗಿದೆ. ಕೆಲವು ಸಮಯದ ಹಿಂದೆ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವಂತೆ ಶಾಸಕರು ಪತ್ರ ಬರೆದಿದ್ದಾರೆ. ಸೇತುವೆ ಕುಸಿಯುವ ಮೊದಲು ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಬದಲಿ ವ್ಯವಸ್ಥೆ ಮಾಡಬೇಕಾಗಿದೆ. ತಪ್ಪಿದಲ್ಲಿ ಅಪಾಯ ಖಚಿತ ಎಂದು ಗ್ರಾಮಸ್ಥರು ಆತಂಕದಿಂದಲೇ ಹೇಳುತ್ತಾರೆ.

ಶಾಸಕರ ಭರವಸೆ
ಸೇತುವೆ ನಾದುರಸ್ತಿಯಲ್ಲಿರುವುದು ಗಮನಕ್ಕೆ ಬಂದಿದೆ. ಅದನ್ನು ತಾತ್ಕಲಿಕವಾಗಿ ದುರಸ್ತಿ ಮಾಡಲು ಜಿ.ಪಂ. ನಿಂದ 2.4 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ನೂತನ ಸೇತುವೆ ನಿರ್ಮಾಣದ ಅನುದಾನಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಇದನ್ನು ಸೇರ್ಪಡೆ ಗೊಳಿಸಲಾಗುವುದೆಂದು ಶಾಸಕ ಅಂಗಾರ ಭರವಸೆ ನೀಡಿದ್ದಾರೆ.
ಚನಿಯ ಕಲ್ತಡ್ಕ, ಸುಳ್ಯ ತಾ.ಪಂ. ಅಧ್ಯಕ್ಷ

ಸಂಬಂಧಪಟ್ಟವರು ಗಮನಹರಿಸಿ
ಕಾಂತಮಂಗಲ ಸೇತುವೆ ಕೇರಳ ರಾಜ್ಯಕ್ಕೂ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಸಂಪರ್ಕದ ಕೊಂಡಿಯಾಗಿದೆ. ಈ ಸೇತುವೆ ಬಿರುಕು ಬಿಡುತ್ತಿದೆ. ಇದು ಕುಸಿಯುವ ಮೊದಲು ಸಂಬಂಧಪಟ್ಟವರು ಗಮನಹರಿಸಲಿ.
– ಸೋಮನಾಥ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next