Advertisement

ಕೋವಿಡ್‌ ಮರಣ ಪ್ರಮಾಣ ಇಳಿಕೆ

07:40 PM Sep 24, 2020 | Team Udayavani |

ದಾವಣಗೆರೆ: ಸಾರ್ವಜನಿಕರು ಇತ್ತೀಚೆಗೆ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರುವ ಜತೆಗೆ ಕೋವಿಡ್‌-19 ತಪಾಸಣೆಗೂ ನಿರಾಕರಿಸುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕರು ಕೋವಿಡ್ ಬಗ್ಗೆ ನಿರ್ಲಕ್ಷ್ಯ ತೋರದೆ ಸುರಕ್ಷತಾ ಕ್ರಮ ಅನುಸರಿಸುವ ಜೊತೆಗೆ ತಪಾಸಣೆಗೂ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಹೇಳಿದರು.

Advertisement

ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ನಡೆದ ವಿಶೇಷ ವಿವಾಹ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಲಾಕ್‌ಡೌನ್‌ ಸಂದರ್ಭದಲ್ಲಿ ಅನುಸರಿಸಿದ ಮುಂಜಾಗ್ರತಾ ಕ್ರಮಗಳನ್ನು ಈಗ ಅನುಸರಿಸುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಕೋವಿಡ್‌ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಪರೀಕ್ಷೆ ಮಾಡುತ್ತಿದ್ದು, ಹೆಚ್ಚಾಗಿ ಪಾಸಿಟಿವ್‌ ಬರುತ್ತಿದೆ. ಇದರಿಂದಾಗಿ ಮರಣ ಪ್ರಮಾಣ ಕಳೆದೊಂದು ವಾರದಿಂದ ಕಡಿಮೆಯಾಗುತ್ತಿದೆ. ಮರಣ ಪ್ರಮಾಣವನ್ನು ತಗ್ಗಿಸಲು ಸಾರ್ವಜನಿಕರು ಬೇಗ ಪರೀಕ್ಷೆಗೆ ಒಳಗಾಗಿ, ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕಾಗಿದೆ ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವ ಪ್ರಮಾಣ ಹೆಚ್ಚು ಮಾಡಿದ್ದೇವೆ. 60 ವರ್ಷ ಮೇಲ್ಪಟ್ಟ ಹಾಗೂ ನಾನಾ ರೋಗಗಳಿಂದ ಬಳಲುತ್ತಿರುವವರ ಸಮೀಕ್ಷೆ ಮಾಡಿ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದೇವೆ. ಆದರೆ ಕೆಲವೆಡೆ ಇದಕ್ಕೆ ಸಾರ್ವಜನಿಕರಿಂದ ಸಹಕಾರ ದೊರೆಯುತ್ತಿಲ್ಲ. ರೋಗ ಬೇಗ ಪತ್ತೆಯಾದಲ್ಲಿ ಚಿಕಿತ್ಸೆ ನೀಡಿ ಬೇಗ ಗುಣಪಡಿಸಲು ಸಾಧ್ಯವಿದೆ. ಹೀಗಾಗಿ ಪರೀಕ್ಷೆಗೆ ಬಂದವರಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸುವ ಪದ್ಧತಿಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಸುಮಾರು ಶೇ. 50 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಎಲ್ಲ ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚು ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 165 ಮನೆಗಳಿಗೆ ಹಾನಿಯಾಗಿದ್ದು ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲಾಗುವುದು. – ಮಹಾಂತೇಶ್‌ ಬೀಳಗಿ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next