Advertisement

ಬಿಕೋ ಎನ್ನುತ್ತಿವೆ ಬೀಚ್‌ಗಳು

11:39 AM Jan 04, 2019 | Team Udayavani |

ಕಾರವಾರ: ಹೊಸ ವರ್ಷಕ್ಕೆ ಕಾಲಿಟ್ಟು ಎರಡು ದಿನ ಮಾತ್ರ ಕಳೆದಿದೆ. ವಿಪರೀತ ಚಳಿಯ ಕಾರಣವಾಗಿಯೋ ಅಥವಾ ಹೊಸ ವರ್ಷದ ಮೂಡ್‌ ಮರೆಯಾಗುತ್ತಿರುವ ಕಾರಣವೋ ಜಿಲ್ಲೆಯ ಕಡಲತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮುರ್ಡೇಶ್ವರ, ಗೋಕರ್ಣದಂಥ ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರ ಬರ ಉಂಟಾಗಿದೆ.

Advertisement

ಸಂಜೆ ವೇಳೆ ಸ್ಥಳೀಯರು ಸೇರಿ ಒಂದಿಷ್ಟು ಪ್ರವಾಸಿಗರು ಕಡಲತೀರಗಳಲ್ಲಿ ಕಾಣಸಿಗುತ್ತಾರೆ. ಹೆಚ್ಚಿನ ಪ್ರವಾಸಿಗರು ಈಗ ವಾಸ್ತವ್ಯ ಮಾಡುವುದಿಲ್ಲ. ಫ್ಲೋಟಿಂಗ್‌ ಟೂರಿಸ್ಟ್‌ ಅರ್ಧ ಗಂಟೆ ನಿಂತು ಕಡಲತೀರದಲ್ಲಿ ಕಳೆದು ಸಾಗಿಬಿಡುತ್ತಾರೆ ಎಂಬ ಮಾತು ಕಡಲತೀರದಲ್ಲಿ ಜಲಸಾಹಸ ಕ್ರೀಡೆ ನಡೆಸುವ ಯುವಕರಿಂದ ಕೇಳಿಬಂತು. ವಿದ್ಯಾರ್ಥಿಗಳ ಪ್ರವಾಸ ಒಂದು ಹಂತದಲ್ಲಿ ಮುಗಿದಿದೆ. ಪರೀಕ್ಷೆಗಳು ಸಮೀಪಿಸುತ್ತಿವೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂಬ ಮಾತು ಪ್ರವಾಸೋದ್ಯಮ ಇಲಾಖೆಯ ನೌಕರರಿಂದ ಕೇಳಿಬಂತು.

ಆದರೂ ಸಂಕ್ರಮಣದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. 2017ರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ 80,30,760 ಪ್ರವಾಸಿಗರು ಬಂದು ಹೋಗಿದ್ದಾರೆ. 2018ರಲ್ಲಿ 92,73,298 ಪ್ರವಾಸಿಗರು ಭೇಟಿ ನೀಡಿದ ದಾಖಲೆ ಇದೆ. ಜಿಲ್ಲೆಯ ಧಾರ್ಮಿಕ ಪ್ರವಾಸಿ ಕೇಂದ್ರಗಳನ್ನು ಸೇರಿ ಒಟ್ಟು 25 ಪ್ರವಾಸಿ ತಾಣಗಳಲ್ಲಿ ಇಟ್ಟ ಅಂಕಿ ಅಂಶಗಳನ್ನು ಆಧರಿಸಿ ಪ್ರವಾಸೋದ್ಯಮ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. 2017ಕ್ಕೆ ಹೋಲಿಸಿದರೆ 2018ರಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ 4.50 ಲಕ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕನ್ನಡದ ಪ್ರವಾಸಿತಾಣಗಳಿಗೆ ಬಂದಿದ್ದಾರೆ. ಡಿಸೆಂಬರ್‌ 2018ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಂದ ಪ್ರವಾಸಿಗರ ಸಂಖ್ಯೆ 9,52,289 ದಷ್ಟಿದೆ. ಕಾರವಾರ ರಾಕ್‌ ಗಾರ್ಡನ್‌ಗೆ 2018 ರಲ್ಲಿ 1.70ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು ದಾಖಲಾಗಿದೆ. 2018 ಡಿಸೆಂಬರ್‌ನಲ್ಲೇ 35 ಸಾವಿರ ಪ್ರವಾಸಿಗರು ರಾಕ್‌ಗಾರ್ಡನ್‌ಗೆ ಭೇಟಿ ನೀಡಿದ್ದಾರೆ. 13861 ವಿದೇಶಿ ಪ್ರವಾಸಿಗರು 2018ರಲ್ಲಿ ಭೇಟಿ ನೀಡಿದ್ದಾರೆ. 2018 ಡಿಸೆಂಬರ್‌ನಲ್ಲೇ 1558 ವಿದೇಶಿ ಪ್ರವಾಸಿಗರು ಜಿಲ್ಲೆಯನ್ನು ದರ್ಶಿಸಿದ್ದಾರೆ. 2017ರಲ್ಲಿ 17364 ಪ್ರವಾಸಿಗರು ಬಂದಿದ್ದರು.

ಜಲ ಸಾಹಸ ಕ್ರೀಡೆಗಳು ಕಾರಣ: ಜಿಲ್ಲೆಯ ನೇತ್ರಾಣಿ ಐಲ್ಯಾಂಡ್‌ನ‌ಲ್ಲಿ ಸ್ಕೂಬಾ ಡೈವಿಂಗ್‌ ಪ್ರಾರಂಭವಾದುದು ಪ್ರವಾಸಿಗರನ್ನು ಆಕರ್ಷಿಸಲು ಕಾರಣವಾಯಿತು. ಅಲ್ಲದೇ ಜಲ ಸಾಹಸ ಕ್ರೀಡೆಗಳು, ಸಮುದ್ರಯಾನ, ಪ್ಯಾರಾ ಗ್ಲೈಡಿಂಗ್‌ ಪ್ರಾರಂಭ ಸಹ ಪ್ರವಾಸಿಗರನ್ನು ಆಕರ್ಷಿಸಲು ನೆರವಾಯಿತು. ಪ್ರವಾಸಿತಾಣಗಳು ಮತ್ತು ಅಲ್ಲಿನ ಸೌಲಭ್ಯಗಳು ಇಂಟರ್‌ನೆಟ್ ಮತ್ತು ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತ ಪ್ರಚಾರದಿಂದ ಜಿಲ್ಲೆಗೆ ಪ್ರವಾಸಿಗರು ಬರಲು ಕಾರಣವಾಯಿತು.

ಕೊರತೆ: ಕಡಲತೀರಗಳಲ್ಲಿ ಪ್ರವಾಸಿಗರು ಸಮುದ್ರ ಸ್ನಾನದ ನಂತರ ಬಟ್ಟೆ ಬದಲಿಸಲು ಕೋಣೆಗಳು ಹಾಗೂ ಸ್ನಾನ ಗೃಹದ ಕೊರತೆ ಕಾಣಿಸುತ್ತಿದೆ. ಸಂಚಾರಿ ಪ್ರವಾಸಿಗರು (ಪ್ಲೋಟಿಂಗ್‌ ಟೂರಿಸ್ಟ್‌) ಸಮುದ್ರ ಸ್ನಾನಕ್ಕೆ ಇಳಿದರೆ ಮಹಿಳೆಯರು ಡ್ರೆಸ್‌ ಬದಲಿಸಲು ಕಿರಿಕಿರಿಯ ವಾತಾವರಣ ಇದೆ. ಪ್ರವಾಸಿಗರಿಗೆ ಕಾರವಾರ ಸೇರಿದಂತೆ ಜಿಲ್ಲೆಯ ಕಡಲತೀರಗಳಲ್ಲಿ ಕೈಗೆಟುಕುವ ದರದಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯ ವ್ಯವಸ್ಥೆ ಹಾಗೂ ಡ್ರೆಸ್ಸಿಂಗ್‌ ರೂಂಗಳು ದೊರೆಯುವಂತೆ ಮಾಡಬೇಕಿದೆ.

Advertisement

ಕಾರವಾರ ನಗರ ಸೌಂದರ್ಯೀಕರಣಕ್ಕೆ ಕಳೆದ ಬಜೆಟ್‌ನಲ್ಲಿ ಇಟ್ಟ 10 ಲಕ್ಷ ರೂ,ಹಣವಿದ್ದು, ಬೀಚ್‌ಗಳಲ್ಲಿ ಡ್ರೆಸ್ಸಿಂಗ್‌ ರೂಂ ನಿರ್ಮಿಸಲು ಬೀಚ್ ಅಭಿವೃದ್ಧಿ ಸಮಿತಿ ಅನುದಾನ ಕೇಳಿದರೆ, ಪ್ರವಾಸೋದ್ಯಮ ಚಟುವಟಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ತಕ್ಷಣ ಅನುದಾನ ನೀಡಲು ಸಿದ್ಧ ಎನ್ನುತ್ತಿದೆ ನಗರಸಭೆ.

ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ಪ್ರೀತಿಯಿಂದ ಸ್ವಾಗತಿಸುವ ಸಂಸ್ಕೃತಿ ನಮ್ಮಲ್ಲಿ ಇನ್ನು ಬೆಳೆಯಬೇಕಿದೆ. ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ತೆರೆದುಕೊಳ್ಳಬೇಕಿದೆ. ಕಡಲತೀರಗಳಲ್ಲಿ ಸಮುದ್ರ ಸ್ನಾನದ ನಂತರ ಬಟ್ಟೆ ಬದಲಿಸಲು ತುರ್ತಾಗಿ ಡ್ರೆಸ್ಸಿಂಗ್‌ ರೂಂಗಳನ್ನು ಪ್ರಾರಂಭಿಸಬೇಕಿದೆ.
ಶೋಭಾ ನಾಯ್ಕ
ಪ್ರವಾಸಿಗರು. ಬೆಂಗಳೂರು

ಕಡಲತೀರಗಳಲ್ಲಿ ಪ್ರವಾಸಿಗರಿಗೆ ಸಮುದ್ರ ಸ್ನಾನದ ನಂತರ ಬಟ್ಟೆ ಬದಲಿಸಲು ಡ್ರೆಸ್ಸಿಂಗ್‌ ರೂಂಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
•ಎಸ್‌.ಯೋಗೇಶ್ವರ,
ಪೌರಾಯುಕ್ತರು, ನಗರಸಭೆ, ಕಾರವಾರ.

ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next