Advertisement

ವಿಮಾನ ಪ್ರಯಾಣಿಕರ ಮೇಲಿನ ದರದ ಹೊರೆ ಇಳಿಕೆ

11:57 AM Sep 02, 2018 | Team Udayavani |

ಬೆಂಗಳೂರು: ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ದಕ್ಷಿಣ ಭಾರತದ ಅತಿ ಹೆಚ್ಚು ದಟ್ಟಣೆ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿವಿಧ ಪ್ರಕಾರದ ಅಭಿವೃದ್ಧಿ ಶುಲ್ಕವನ್ನು ಪರಿಷ್ಕರಿಸಿ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಆದೇಶ ಹೊರಡಿಸಿದೆ. ಈ ಪರಿಷ್ಕರಣೆಯಿಂದ ಪ್ರಯಾಣಿಕರ ಮೇಲಿನ ದರದ ಹೊರೆ ಇಳಿಕೆಯಾಗಲಿದ್ದು, ಬಳಕೆದಾರರ ಅಭಿವೃದ್ಧಿ ಶುಲ್ಕ ಅರ್ಧಕ್ಕರ್ಧ ಕಡಿಮೆಯಾಗಿದೆ. 

Advertisement

ಈ ಹಿಂದೆ 306 ರೂ. ಇದ್ದ ದೇಶೀಯ ವಿಮಾನ ಪ್ರಯಾಣದ “ಬಳಕೆದಾರರ ಅಭಿವೃದ್ಧಿ ಶುಲ್ಕ’ (ಯುಡಿಎಫ್), ಈಗ 139 ರೂ.ಗೆ ಇಳಿದಿದೆ. ಅದೇ ರೀತಿ, 1,226 ರೂ. ಇದ್ದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು 558 ರೂ. ನಿಗದಿಪಡಿಸಿ ಅನುಮೋದನೆ ನೀಡಲಾಗಿದೆ.

ಅಲ್ಲದೆ, ನಿಲ್ದಾಣದಲ್ಲಿ ಬಂದಿಳಿಯುವ ವಿಮಾನಗಳಿಗೆ ವಿಧಿಸಲಾಗುವ ಶುಲ್ಕದಲ್ಲೂ ಭಾರೀ ಪ್ರಮಾಣದಲ್ಲಿ ಇಳಿಮುಖ ಆಗಿದೆ. ಇದರೊಂದಿಗೆ ಶುಲ್ಕದ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆ ಆಗಲಿದೆ. ಇದೆಲ್ಲದ ಪರಿಣಾಮ ಪ್ರಯಾಣಿಕರಿಗೆ ಟಿಕೆಟ್‌ ದರದ ಹೊರೆ ತಗ್ಗಲಿದೆ.  

ಪರಿಷ್ಕೃತ ದರವು ಸೆಪ್ಟೆಂಬರ್‌ 16ರಿಂದ ಅನ್ವಯ ಆಗಲಿದೆ. ಈ ದರವು ಒಂದು ವರ್ಷದ ಮಟ್ಟಿಗೆ ಅಂದರೆ 2019ರ ಮಾರ್ಚ್‌ 31ರವರೆಗೆ ಮುಂದುವರಿಯಲಿದೆ. ತದನಂತರ 2019ರ ಏಪ್ರಿಲ್‌ 1ರಿಂದ 2020ರ ಮಾರ್ಚ್‌ 31ರವರೆಗೆ ಮತ್ತೆ ಕೊಂಚ ಏರಿಕೆ ಆಗಲಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಯುಡಿಎಫ್ ಕ್ರಮವಾಗಿ 179 ಹಾಗೂ 716 ಆಗಲಿದೆ. 2020ರ ಏಪ್ರಿಲ್‌ 1ರಿಂದ 2021ರ ಮಾರ್ಚ್‌ ಅಂತ್ಯಕ್ಕೆ ಇದು ಮತ್ತೆ ಕ್ರಮವಾಗಿ 100 ಹಾಗೂ 400 ರೂ.ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.  

Advertisement

ಕಳೆದ ಎರಡು ವರ್ಷಗಳಿಂದ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್)ವನ್ನು ಪರಿಷ್ಕರಣೆ ಮಾಡಿರಲಿಲ್ಲ. ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಚೂಣಿಯಲ್ಲಿದೆ.

ಮತ್ತೂಂದೆಡೆ ಕಡಿಮೆ ದರದಲ್ಲಿ ವಿಮಾನಯಾನಕ್ಕೆ ಪೈಪೋಟಿ ನಡೆದಿ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಶುಲ್ಕ ಇಳಿಕೆ ಆಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಪ್ರಾಧಿಕಾರಕ್ಕೆ ಮನವಿ ಕೂಡ ಸಲ್ಲಿಕೆಯಾಗಿತ್ತು. ಇದೆಲ್ಲವನ್ನು ಪರಿಶೀಲಿಸಿ, ದರ ಪರಿಷ್ಕರಣೆ ಮಾಡಲಾಗಿದೆ.  

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅತಿ ಹೆಚ್ಚು ದಟ್ಟಣೆ ಇರುವ ನಿಲ್ದಾಣವಾಗಿದ್ದು, ನಿತ್ಯ ಇಲ್ಲಿ 80 ಸಾವಿರದಿಂದ ಒಂದು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, 300ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತವೆ.

ಪ್ರಯಾಣಿಕರ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು 2016ರಿಂದಲೂ ಪರಿಷ್ಕರಿಸಿರಲಿಲ್ಲ. ಈಗ ಪರಿಗಣಿಸಿರುವುದು ಸ್ವಾಗತಾರ್ಹ. ಇದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಇಲ್ಲವಾಗಬೇಕು ಎಂದು ಪ್ರಜಾ ಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸಿದರು. 

ಯುಡಿಎಫ್ ಶುಲ್ಕದ ವಿವರ ಹೀಗಿದೆ.
ಪ್ರಯಾಣಿಕರು    ಪ್ರಸ್ತುತ ಯುಡಿಎಫ್    ಪರಿಷ್ಕೃತ  (2018-19)    2019-20    2020-21

-ದೇಶೀಯ        306 ರೂ.        139 ರೂ.    179 ರೂ.    100 ರೂ.
-ವಿದೇಶಿ        1,226 ರೂ.        558 ರೂ.    716 ರೂ.    400 ರೂ. 
-ಅಂತರರಾಷ್ಟ್ರೀಯ ವಿಮಾನಗಳ ಲ್ಯಾಂಡಿಂಗ್‌ ಶುಲ್ಕ (ಮೊದಲ 100 ಮೆ.ಟ.)    650 ರೂ.    260 ರೂ. (ಪ್ರತಿ ಮೆ.ಟ.ಗೆ)    –    –
-ದೇಶೀಯ ವಿಮಾನಗಳ ಲ್ಯಾಂಡಿಂಗ್‌ ಶುಲ್ಕ (ಮೊದಲ 100 ಮೆ.ಟ.)    331 ರೂ.    132 ರೂ.     –    –
-ವಿಮಾನಗಳ ನಿಲುಗಡೆ ಶುಲ್ಕ (ಮೊದಲ 100 ಮೆ.ಟ.)    8.90 ರೂ. (ಗಂಟೆಗೆ)    4 ರೂ.    –    –

Advertisement

Udayavani is now on Telegram. Click here to join our channel and stay updated with the latest news.

Next