ರಾಯಚೂರು: ಕೇಂದ್ರ ಅಥವ ರಾಜ್ಯ ಸರ್ಕಾರಗಳು ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸುವ ಯೋಜನೆಗಳು ದುರ್ಬಳಕೆ ಆಗದಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೋಷಣ ಅಭಿಯಾನ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಮತ್ತು ಸ್ವತ್ಛ ಭಾರತ್ ಮಿಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಆತ್ಮತೃಪ್ತಿ ತರುವಂಥ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಯೋಜನೆಗಳು ಸಾಫಲ್ಯ ಕಾಣಲು ಸಾಧ್ಯ. ನಾವು ಕೇವಲ ಯೋಜನೆಗಳನ್ನು ರೂಪಿಸಬಲ್ಲೆವು. ಅವುಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳೇ. ಹೀಗಾಗಿ ಅಧಿಕಾರಿಗಳು ಹೆಚ್ಚು ಶ್ರದ್ಧೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ನೌಕರಿಯಲ್ಲ ಎಂಬ ನಿರ್ಲಕ್ಷ್ಯ ಧೋರಣೆಯಿಂದ ಕೆಲಸ ಮಾಡದಿರಿ. ಸೌಲಭ್ಯ ಪಡೆದ ಪಲಾನುಭವಿಗಳು ನಿಮ್ಮನ್ನು ಹರಸಿದರೆ ಪುಣ್ಯಲಭಿಸುತ್ತದೆ. ಅದೇ ಫಲಾನುಭವಿಗಳು ಸೌಲಭ್ಯ ಸಿಗದೆ ಹಿಡಿ ಶಾಪ ಹಾಕಿದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.
ಗರ್ಭಿಣಿಯರಿಗೆ ಉತ್ತಮ ಆಹಾರ ಸಿಕ್ಕರೆ ಜನಿಸುವ ಮಕ್ಕಳು ಕೂಡ ಆರೋಗ್ಯವಂತರಾಗಿರುತ್ತಾರೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಮಾತೃವಂದನಾ ಯೋಜನೆ ಜಾರಿಗೊಳಿಸಿದರೆ, ನವೆಂಬರ್‌ನಿಂದ ರಾಜ್ಯ ಸರ್ಕಾರ ಮಾತೃಶ್ರೀ ಎಂಬ ಯೋಜನೆ ಜಾರಿಗೆ ತರುತ್ತಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆ ಇದೆ ಎಂಬ ವಿಚಾರ ವ್ಯಾಪಕ ಚರ್ಚೆಗೀಡಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಇಂಥ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕೂಲಿಗೆ ಹೋಗದಂತೆ ಸಹಾಯಧನ ನೀಡಲಾಗುತ್ತಿದೆ. ಇದು ಅರ್ಹ ಫಲಾನುಭವಿಗಳಿಗೆ ತಲುಪಲಿ ಎಂದು ಸೂಚಿಸಿದರು. ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಮಹಿಳೆಯರಲ್ಲಿ ಹೆಚ್ಚು ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದರಿಂದ ಬುದ್ಧಿಮಾಂದ್ಯ ಮಕ್ಕಳು ಜನಿಸಬಹುದು. ಇಂಥ ಸಮಸ್ಯೆ ಬಾರದಂತೆ ಯೋಜನೆ ಜಾರಿಗೊಳಿಸಲಾಗಿದೆ. ಪ್ರಧಾನಿ ಮೋದಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಗೌರವ ಧನ ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ನಾಗರಾಜ, ಸಹಾಯಕ ನಿರ್ದೇಶಕ ವೀರನಗೌಡ, ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ, ತಿಮ್ಮಾರೆಡ್ಡಿ ಪಾಲ್ಗೊಂಡಿದ್ದರು. ಪಾಲ್ಗೊಂಡಿದ್ದ ಗರ್ಭಿಣಿಯರಿಗೆ ಜಿಲ್ಲಾಡಳಿತದಿಂದ ಸೀಮಂತ ಕಾರ್ಯಕ್ರಮ ನಡೆಯಿತು.