ಉಡುಪಿ: ಕೋವಿಡ್ 19 ಶಂಕಿತರ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ರಕ್ತನಿಧಿಗಳು ಬರಿದಾಗುತ್ತಿದ್ದು, ಮಾರ್ಚ್ ಆರಂಭದಿಂದ ರಕ್ತ ಸಂಗ್ರಹದಲ್ಲಿ ಸಾಕಷ್ಟು ಇಳಿಕೆ ಕಂಡಿದೆ.
ಇದೇ ಸ್ಥಿತಿ ಮುಂದುವರಿದರೆ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೋವಿಡ್ 19 ಸೋಂಕು ಭೀತಿಯಿಂದ ರಾಜ್ಯವೇ ಮುಳುಗಿದೆ. ಸರಕಾರದ ಸೂಚನೆ ಮೇರೆಗೆ ಬಹುತೇಕ ಸಂಸ್ಥೆಗಳು ಸಂಪೂರ್ಣ ಬಂದ್ ಆಗಿವೆ. ರಕ್ತದಾನಿಗಳ ಸಂಗ್ರಹಕ್ಕೆ ಆಕರವಾಗಿದ್ದ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳಲ್ಲಿ ಚಟುವಟಿಕೆಗಳು ಸ್ತಬ್ಧವಾಗಿವೆ.
ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ರಕ್ತದಾನ ಶಿಬಿರಗಳು ರದ್ದಾಗಿವೆ. ಸಂಘ ಸಂಸ್ಥೆಗಳ ರಕ್ತದಾನ ಶಿಬಿರಗಳನ್ನು ಮುಂದೂಡ ಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಖಾಸಗಿ ಹಾಗೂ ಸರಕಾರಿ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಪ್ರಮಾಣ ಕುಸಿದಿದೆ. ಒಂದು ಶಿಬಿರದಲ್ಲಿ 50 ಯುನಿಟ್ ರಕ್ತವಾದರೂ ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ 250ಕ್ಕೂ ಅಧಿಕ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತ ಬಂದಿವೆ.
ಉಡುಪಿ, ಕಾರ್ಕಳ, ಕುಂದಾಪುರ ಮೊದಲಾದ ಕಡೆಗಳ ಸಂಘ-ಸಂಸ್ಥೆಗಳಿಂದ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆಯಾಗಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಕ್ತ ಸೇರಿದಂತೆ ರಕ್ತದ ಇತರ ಭಾಗಗಳಾದ ಬಿಳಿ ರಕ್ತಕಣಗಳು, ಪ್ಲೆಟ್‌ಲೆಟ್‌ಗಳು ಸಿಗದೆ ರೋಗಿಗಳು ಸಮಸ್ಯೆ ಎದುರಾಗುವ ಸಂಭವ ಇದೆ.
ಅಜ್ಜರಕಾಡು ಜಿಲ್ಲಾ ಆಸ್ಪತ್ತೆಯ ರಕ್ತ ನಿಧಿ ಕೇದ್ರದಲ್ಲಿ ವಾರ್ಷಿಕ 27 ಸಾವಿರ ಯುನಿಟ್‌ಗೂ ಅಧಿಕ ರಕ್ತ ಸಂಗ್ರಹವಾಗುತ್ತದೆ. ನೆರೆಜಿಲ್ಲೆಗಳಿಂದಲೂ ರಕ್ತಕ್ಕೆ ಬೇಡಿಕೆಗಳು ಬರುತ್ತವೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ವಾರಕ್ಕೆ 2-3 ಬಾರಿ ರಕ್ತದಾನ ಶಿಬಿರ ನಡೆಯುತ್ತಿರುತ್ತದೆ. ಆಸ್ಪತ್ರೆಗೆ ಅಪಘಾತ, ಹೆರಿಗೆ, ಶಸ್ತ್ರ ಚಿಕಿತ್ಸೆ ಇತ್ಯಾದಿಗಳಿಗೆ ಸಂಬಂಧಿಸಿ ತಿಂಗಳಿಗೆ ಕನಿಷ್ಠ 1,500 ಯುನಿಟ್ ರಕ್ತದ ಆವಶ್ಯಕತೆಯಿದೆ.
ರಕ್ತದಾನ ಶಿಬಿರಕ್ಕೆ ಆದೇಶ ಅಡ್ಡಿ
ರಕ್ತದಾನ ಶಿಬಿರಗಳಿಂದಲೇ ಶೇ.50ರಷ್ಟು ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಶಿಬಿರ ಗಳಿಗೆ ನಿರ್ಬಂಧ ಹೇರಿರುವುದರಿಂದ ಹಿನ್ನಡೆ ಯಾಗುತ್ತಿದೆ ಎಂಬುದು ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರ ಅಭಿಪ್ರಾಯ. ದಾನಿಗಳು ರಕ್ತದಾನ ಮಾಡಬೇಕಿದ್ದರೆ ಸರಕಾರ ಆದೇಶದಲ್ಲಿ ಸಡಿಲಿಕೆ ಮಾಡಬೇಕಿದೆ.
ಹೀಗೆ ರಕ್ತದಾನ ಮಾಡಿ
ರಕ್ತದಾನ ಶಿಬಿರಗಳನ್ನು ನಡೆಸಲು ಅಡ್ಡಿಯಾಗಿದ್ದರೂ ರಕ್ತದಾನಿಗಳು, ಆಸ್ಪತ್ರೆಗಳಿಗೆ ತೆರಳಿ ರಕ್ತದಾನ ಮಾಡಬಹುದು. ಇದರಿಂದ ತುರ್ತು ಸಂದರ್ಭಗಳಲ್ಲಿ ರಕ್ತದ ಅಭಾವವಾಗುವುದನ್ನು ತಪ್ಪಿಸಿದಂತಾಗುತ್ತದೆ.