ಭಟ್ಕಳ: ಮಳೆಗಾಲ ಮುಗಿಯುತ್ತಿದ್ದಂತೆಯೇ ನದಿಗಳೂ ಬತ್ತಲು ಆರಂಭವಾಗಿದ್ದು ಕುಡಿಯುವ ನೀರಿಗಾಗಿ ಜನತೆ ಆತಂಕಕ್ಕೊಳಗಾಗಿದ್ದಾರೆ. ಭಟ್ಕಳ ನಗರಕ್ಕೆ ಹಾಗೂ ಶಿರಾಲಿ, ಮಾವಿನಕುರ್ವೆ ಗ್ರಾಪಂಗೆ ಕುಡಿಯುವ ನೀರೊದಗಿಸುವ ಕಡವಿನಕಟ್ಟೆ ಡ್ಯಾಂಗೆ ನೀರುಣಿಸುವ ಭೀಮಾ ನದಿಯಲ್ಲಿ ಕೂಡಾ ಮಳೆ ನಿಂತು ಕೆಲವೇ ತಿಂಗಳಲ್ಲಿ ಒಳಹರಿವು ಪ್ರತಿ ವರ್ಷಕ್ಕಿಂತ ಸುಮಾರು ಶೇ.50 ರಷ್ಟು ಕಡಿಮೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ಅತ್ಯಂತ ದುರ್ಗಮ ಕಾಡಿನಿಂದ ಹರಿದು ಬರುತ್ತಿರುವ ಭೀಮಾ ನದಿ ಪ್ರತಿವರ್ಷ ಮಾರ್ಚ್, ಎಪ್ರಿಲ್ ತನಕವೂ ಉತ್ತಮ ಒಳ ಹರಿವು ಇರುವ ನದಿಯಾಗಿದೆ. ನದಿಯಲ್ಲಿ ಸದಾ ನೀರು ಹರಿಯುತ್ತಿದ್ದರೆ, ಕಡವಿನಕಟ್ಟೆ ಡ್ಯಾಂನಲ್ಲಿ ಕೂಡಾ ಸದಾ ನೀರು ಇದ್ದು ಕುಡಿಯುವ ನೀರಿನೊಂದಿಗೆ ತಾಲೂಕಿನ ವೆಂಕಟಾಪುರ, ಶಿರಾಲಿ, ಮಾವಿನಕಟ್ಟೆ, ಬೇಂಗ್ರೆ ಮುಂತಾದ ಪ್ರದೇಶದ ರೈತರಿಗೆ ಸರಬರಾಜು ಮಾಡಲು ಸಾಕಾಗವಷ್ಟು ನೀರು ಇರುತ್ತಿತ್ತು. ರೈತರು ಇದೇ ನೀರಿನಿಂದಲೇ ಮೂರು ಬೆಳೆ ಬೆಳೆಯುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ನೀರಿನ ಒಳಹರಿವು ಕಡಿಮೆಯಾಗುವುದರೊಂದಿಗೆ ರೈತರಿಗೂ ನೀರು ಇಲ್ಲದಂತಾಗಿದೆ.
ಕುಡಿಯುವ ನೀರು ಸರಬರಾಜು: ಕಳೆದ ಹಲವಾರು ವರ್ಷಗಳ ಹಿಂದೆ ಭಟ್ಕಳ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಆರಂಭಿಸುವಾಗ ನೀರಿನ ಸಂಪನ್ಮೂಲ ಇಲ್ಲದ ಕಾರಣ ಕಡವಿನಕಟ್ಟೆ ಡ್ಯಾಂ ನಿಂದಲೇ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಯಿತು. ನಂತರದ ದಿನಗಳಲ್ಲಿ ಶಿರಾಲಿ ಗ್ರಾಪಂ ಹಾಗೂ ಮಾವಿನಕುರ್ವೆ ಗ್ರಾಪಂಗೂ ಇದೇ ಡ್ಯಾಂನಿಂದ ನೀರೊದಗಿಸಲು ಆರಂಭಿಸಲಾಯಿತು.
ಈ ಬಾರಿ ನೀರಿಗೆ ಬರ: ಈ ಬಾರಿಯ ಮಳೆಗಾಲ ಇನ್ನೇನು ಮುಗಿಯುತ್ತಾ ಬರುತ್ತಿರುವಾಗಲೇ ಭೀಮಾ ನದಿಯ ಒಳಹರಿವು ಶೇ.75ರಷ್ಟು ಕಡಿಮೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಲಕ್ಷಾಂತರ ಗ್ಯಾಲನ್ ನೀರು ಕುಡಿಯುವ ಉದ್ದೇಶಕ್ಕೆ ಉಪಯೋಗವಾಗುತ್ತಿದ್ದರೆ, ಇಂದು ನದಿಯಲ್ಲಿ ಒಳ ಹರಿವೇ ಇಲ್ಲದೇ ನೀರು ಒಣಗುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮಾರ್ಚ್, ಎಪ್ರಿಲ್ ತನಕವೂ ನೀರು ಹರಿದು ಬರುತ್ತಿದ್ದರೆ, ಈ ಬಾರಿ ನವೆಂಬರ್‌ನಲ್ಲಿಯೇ ನೀರಿನ ಹರಿವು ಕಡಿಮೆಯಾಗಿದ್ದು ಇನ್ನೇನು ತಿಂಗಳೊಂದರಲ್ಲಿಯೇ ನದಿಯ ಒಳಹರಿವು ಬತ್ತಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೂಳು ತುಂಬಿದ್ದ ಡ್ಯಾಂ ಸೈಟ್: ಕಳೆದ ಕೆಲವು ವರ್ಷಗಳ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗಾಗಿ ಸರಕಾರದ ವತಿಯಿಂದ ಹಣ ಮಂಜೂರಿಯಾಗಿದ್ದು ರಿಪೇರಿ ಕೂಡಾ ಮಾಡಲಾಗಿತ್ತು. ಡ್ಯಾಂ ರಿಪೇರಿ ಮಾಡುವಾಗ ನೀರಿನ ರಭಸವನ್ನು ಕಡಿಮೆ ಮಾಡಿಕೊಳ್ಳಲು ಡ್ಯಾಂ ಒಳಗಡೆಯಲ್ಲಿ ಸುಮಾರು 300 ಲಾರಿಗಳಷ್ಟು ಮಣ್ಣನ್ನು ಹಾಕಿಕೊಂಡಿದ್ದು ಡ್ಯಾಂ ರಿಪೇರಿಯಾದ ತಕ್ಷಣದಲ್ಲಿ ಮಳೆಗಾಲ ಆರಂಭವಾಗಿದ್ದರಿಂದ ಡ್ಯಾಂ ಸೈಟ್‌ನಲ್ಲಿ ಹಾಕಿದ್ದ ಮಣ್ಣನ್ನು ತೆಗೆಯದೇ ಹಾಗೆಯೇ ಬಿಡಲಾಗಿತ್ತು. ಕಳೆದ 3-4 ವರ್ಷಗಳಿಂದ ಡ್ಯಾಂ ಒಳಗಡೆಯಿದ್ದ ನೂರಾರು ಲೋಡ್ ಮಣ್ಣನ್ನು ತೆಗೆಯುವಂತೆ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಜನರ ಕೂಗಾಗಿದೆ. ಈ ಬಾರಿಯಾದರೂ ಡ್ಯಾಂ ಒಳಗಿರುವ ಮಣ್ಣು ತೆಗೆದು ನೀರಿನ ಸಂಗ್ರಹ ಹೆಚ್ಚಿಸುವರೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಆರ್ಕೆ, ಭಟ್ಕಳ