Advertisement

ಮನೆ, ದೇವಾಲಯಕ್ಕಷ್ಟೇ ಸೀಮಿತ ಗಣಪತಿ ಹಬ್ಬ;  ಗಣೇಶ ಮೂರ್ತಿಗಳಿಗೆ ಕುಸಿದ ಬೇಡಿಕೆ

08:02 PM Aug 20, 2020 | mahesh |

ಕುಂದಾಪುರ: ಗಣೇಶ ಚತುರ್ಥಿ ಹಬ್ಬಕ್ಕೆ ನಾಲ್ಕು ದಿನಗಳ ಮೊದಲು ರಾಜ್ಯ ಸರಕಾರ ಸಾರ್ವಜನಿಕ ಚೌತಿ ಆಚರಣೆಗೆ ಅನುಮತಿ ನೀಡಿದ ಕಾರಣ ಪೆಂಡಾಲ್‌ಗ‌ಳಲ್ಲಿ ಸಾರ್ವಜನಿಕ ಉತ್ಸವ ಆಚರಣೆಯೇ ಈ ಬಾರಿ ಅನುಮಾನ. ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಷ್ಟೇ ಆಚರಣೆಗೆ ಸೀಮಿತವಾದಂತಿದೆ. ವಿನಾಯಕನ ವಿಗ್ರಹಕ್ಕೂ ಕಳೆದ ವರ್ಷದಷ್ಟು ಬೇಡಿಕೆ ಇಲ್ಲ. ಹಿಂದಿನ ವರ್ಷಗಳಿಗಿಂತ ಶೇ. 40ರಷ್ಟು ವಿಗ್ರಹ ತಯಾರಿಕೆ ಇಳಿಮುಖಗೊಂಡಿದೆ.

Advertisement

ಆದೇಶ
ಪ್ರತಿ ವರ್ಷ ನಾಗರ ಪಂಚಮಿಯಂದು ಗಣಪತಿಯ ಪೀಠ, ಮಣೆಯನ್ನು ವಿಗ್ರಹ ರಚನೆಕಾರರಿಗೆ ನೀಡಿ ಭಕ್ತರ ಆಶಯದಂತೆ ವಿಗ್ರಹಗಳ ರಚನೆ ನಡೆಯುತ್ತದೆ. ಈ ಬಾರಿ ಸಾರ್ವಜನಿಕ ಆಚರಣೆಗೆ ಸರಕಾರ ಅನುಮತಿ ಕೊಡದಿದ್ದ ಕಾರಣ ವಿಗ್ರಹ ತಯಾರಿಗೆ ಆದೇಶಗಳೇ ಬಂದಿರಲಿಲ್ಲ. ದೇವಾಲಯ, ಮನೆಗಳಲ್ಲಿ ಪೂಜಿಸುವ ಗಣಪತಿ ವಿಗ್ರಹಗಳಿ ಗಷ್ಟೇ ಬೇಡಿಕೆ ಬಂದಿತ್ತು.

8-9 ದೇಗುಲ ಮಾತ್ರ
ಕುಂದಾಪುರದ ವಸಂತ ಗುಡಿಗಾರ್‌ ಅವರು ಕಳೆದ 39 ವರ್ಷಗಳಿಂದ ವೆಂಕಟರಮಣ ದೇವಸ್ಥಾನ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರತಿ ವರ್ಷ 90ಕ್ಕೂ ಅಧಿಕ ಪರಿಸರಸ್ನೇಹಿ ಗಣಪತಿ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಆದರೆ ಈ ಬಾರಿ 69 ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಹಿಂದೆ 15-20 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಬೇಡಿಕೆ ಬರುತ್ತಿತ್ತು. ಈ ಬಾರಿ ಮಹಾಂಕಾಳಿ, ಕುಂದೇಶ್ವರ, ರಾಮಮಂದಿರ, ಹೆಮ್ಮಾಡಿ, ಹೀಗೆ 8-9 ದೇವಸ್ಥಾನಗಳಿಂದ ಬೇಡಿಕೆ ಬಂದಿದೆ. ರಾತ್ರಿ ಹಗಲು 6-7 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಕಡಿಮೆ ಅವಧಿಯಾದ ಕಾರಣ ಹೊಸ ವಿನ್ಯಾಸದ ವಿಗ್ರಹ ಮಾಡಿಲ್ಲ. ಭಕ್ತರ ಬೇಡಿಕೆಯ ಎತ್ತರದ ವಿಗ್ರಹ ತಯಾರಿಸಲಾಗಿದೆ. ಸರಕಾರ 2, 4 ಅಡಿಗಳ ಮಿತಿ ಇಟ್ಟಿರುವುದು ಸಂಪ್ರದಾಯದ ಆಚರಣೆ ನಿಟ್ಟಿನಲ್ಲಿ ಸರಿಯಲ್ಲ ಎನ್ನುತ್ತಾರೆ ವಸಂತ ಗುಡಿಗಾರ್‌.

ಬೇಡಿಕೆ ಕಡಿಮೆ
ಹೊಸಂಗಡಿಯ ಎಚ್‌. ಲಕ್ಷ್ಮೀನಾರಾಯಣ ಮಲ್ಯ ಅವರ ಕುಟುಂಬ ಸುಮಾರು 8 ದಶಕ ಗಳಿಗೂ ಹೆಚ್ಚು ಕಾಲದಿಂದ ಗಣೆೇಶ ಮೂರ್ತಿ ತಯಾರಿಸುವ ಕುಲಕಸುಬನ್ನಾಗಿಸಿಕೊಂಡಿದೆ. ಆದರೆ ಈ ಬಾರಿ ವಿಗ್ರಹ ರಚನೆಗೆ ಅಷ್ಟೇನೂ ಬೇಡಿಕೆ ಇದ್ದಂತಿಲ್ಲ. ಕಳೆದ ವರ್ಷ 22 ಗಣಪನ ವಿಗ್ರಹಗಳನ್ನು ತಯಾರಿಸಿದ್ದೆ. ಈ ಸಲ ಈ ವರೆಗೆ 12 ವಿಗ್ರಹಗಳಿಗೆ ಬೇಡಿಕೆ ಬಂದಿದೆ. ಸಾರ್ವಜನಿಕ ಆಚರಣೆ ಬಗ್ಗೆ ಗೊಂದಲ ಇರುವುದರಿಂದ ಬೇಡಿಕೆ ಕಡಿಮೆಯಿದೆ ಎನ್ನುತ್ತಾರೆ ಅವರು.

ಯಾವ ವರ್ಷ ಎಷ್ಟೆಷ್ಟು?
ಕುಂದಾಪುರ ಉಪ ವಿಭಾಗದಲ್ಲಿ ಕಳೆದ ವರ್ಷ ಹಾಗೂ ಅದಕ್ಕೂ ಹಿಂದಿನ ವರ್ಷ ಒಟ್ಟು 179 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆದಿತ್ತು. ಪೊಲೀಸ್‌ ಠಾಣೆಗಳಾದ ಕುಂದಾಪುರ ನಗರ – 37, ಕುಂದಾಪುರ ಗ್ರಾಮಾಂತರ – 22, ಗಂಗೊಳ್ಳಿ – 30, ಬೈಂದೂರು – 45, ಕೊಲ್ಲೂರು – 14, ಶಂಕರನಾರಾಯಣ – 30 ಹಾಗೂ ಅಮಾಸೆಬೈಲು – 8 ಕಡೆಗಳಲ್ಲಿ ಆಚರಿಸಲಾಗಿತ್ತು.

Advertisement

ಮನೆ ಗಣಪನಿಗೆ ಬೇಡಿಕೆ
ಸುಮಾರು 25 ವರ್ಷಗಳಿಂದ ಗಣಪನ ವಿಗ್ರಹ ತಯಾರಿಸುತ್ತಿದ್ದು, ಕಳೆದ ಬಾರಿ 79 ವಿಗ್ರಹಗಳನ್ನು ತಯಾರಿಸಿದ್ದೆವು. ಅದರಲ್ಲಿ 16 ಸಾರ್ವಜನಿಕ ವಿಗ್ರಹಗಳಿದ್ದವು. ಆದರೆ ಈ ಬಾರಿ ಈ ವರೆಗೆ 10 ವಿಗ್ರಹಗಳಿಗಷ್ಟೇ ಬೇಡಿಕೆ ಬಂದಿದೆ. ಆದರೆ ಈ ಬಾರಿ ಮನೆಗಳಲ್ಲಿ ಪೂಜಿಸುವ ಗಣಪನಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಬಾರಿಗಿಂತ ಈ ಸಲ 3 ಮನೆ ಗಣಪನಿಗೆ ಹೆಚ್ಚುವರಿ ಬೇಡಿಕೆಯಿದೆ.
– ಚಂದ್ರಶೇಖರ್‌ ನಾಯಕ್‌, ಹುಣ್ಸೆಮಕ್ಕಿ ವಿಗ್ರಹ ತಯಾರಕರು

Advertisement

Udayavani is now on Telegram. Click here to join our channel and stay updated with the latest news.

Next