Advertisement

ರೋಗಬಾಧೆಗೆ ನೆಲಕ್ಕುರುಳುತ್ತಿವೆ ಅಡಿಕೆ ಮರಗಳು!

01:18 PM Apr 06, 2019 | Naveen |

ಶೃಂಗೇರಿ: ಮಲೆನಾಡು ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಮರಗಳಿಗೆ ಹಳದಿ ಎಲೆ ರೋಗ ಆವರಿಸುತ್ತಿದ್ದು, ಇದನ್ನು
ತಡೆಯಲು ರೈತರು ಬುಡಸಮೇತವಾಗಿ ಕಡಿದು ಹಾಕುತ್ತಿದ್ದಾರೆ.
ಅಡಕೆ ಮರಗಳಿಗೆ ಹರಡುವ ಹಳದಿ ಎಲೆ ರೋಗಕ್ಕೆ ಔಷ ಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯ್ಲಲಿ ಉಪ ಬೆಳೆಯಾದ ಕಾಫಿ, ಕಾಳುಮೆಣಸಿಗೂ ಅಡ್ಡಿಯಾಗಿದ್ದ ಅಡಕೆ ಮರಗಳು ನೆಲಕ್ಕುರುಳುತ್ತಿವೆ.

Advertisement

ಮೆಣಸೆ ಗ್ರಾಪಂನ ಮರಟೆ ಪ್ರವೀಣ ಮತ್ತು ಸುಬ್ರಾವ್‌ ತಮ್ಮ ತೋಟದ ಮೂರು ಎಕರೆ ತೋಟದಲ್ಲಿ ಅಡಕೆ ಮರಗಳನ್ನು ಕಡಿದು ಹಾಕಿದ್ದಾರೆ.

ತಾಲೂಕಿನಲ್ಲಿ ಕಳೆದ ಆರು ದಶಕದಿಂದ ಕಾಡುತ್ತಿರುವ ಹಳದಿ ಎಲೆ ರೋಗದಿಂದ ಕಂಗೆಟ್ಟಿರುವ ರೈತರು ಬದಲಿ ಬೆಳೆಯಾಗಿ ಕಾಫಿ, ಕಾಳುಮೆಣಸು ಬೆಳೆಯುತ್ತಿದ್ದಾರೆ. ತೋಟದ ತುಂಬಾ ಅಲ್ಲಲ್ಲಿ ಅಡಕೆ ಮರವಿರುತ್ತಿದ್ದರೂ, ಅಡಕೆ ಇಳುವರಿ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದ್ದು,ಇದಕ್ಕೆ ಅಂತಿಮ ಪರಿಹಾರವಾಗಿ
ರೈತರೇ ಕಂಡುಕೊಂಡ ದಾರಿ ಅಡಕೆ ಮರವನ್ನೇ ಕಡಿದುರುಳಿಸುವುದು. ಇಂತಹ ಪ್ರಯತ್ನವನ್ನು ಈಗಾಗಲೇ ಕೆಲ ರೈತರು ಮಾಡಿದ್ದಾರೆ.

ಹೆಚ್ಚುತ್ತಿದೆ ಖರ್ಚು: ಹಳದಿ ಎಲೆ ರೋಗ ಪೀಡಿತ ಮರಗಳು ಕ್ಯಾನ್ಸ್‌ರನಂತೆ ಸಾಯಲು ಬಿಡುವುದಿಲ್ಲ. ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿತವಾದರೂ, ಮರ ಮಾತ್ರ ಹಾಗೇ ಇರುತ್ತದೆ. ಇಂಥಹ ಮರ ತೋಟದಲ್ಲಿ ಇರುವುದರಿಂದ ರೈತರಿಗೆ ಗೊಬ್ಬರ, ಕಳೆ ನಿಯಂತ್ರಣ ಮತ್ತಿತರ ಎಲ್ಲ ಖರ್ಚು ಹೆಚ್ಚಾಗುತ್ತದೆ. ಅಡಕೆ ಮರದ
ನೆರಳು ತೋಟದಲ್ಲಿ ಹೆಚ್ಚಾಗಿ ಇರುವುದರಿಂದ ಕಾಫಿ ಹಾಗೂ ಕಾಳುಮೆಣಸಿನ ಬೆಳೆ ಇಳುವರಿಯಲ್ಲಿ ಸಾಕಷ್ಟು ಕುಸಿತವಾಗುತ್ತದೆ.

ಹೆಚ್ಚುತ್ತಿರುವ ಹಳದಿ ಎಲೆ ರೋಗ: ಪರಂಪರಾಗತವಾಗಿ ಬಂದಿದ್ದ ಅಡಕೆ ಮರವನ್ನು ಕಡಿಯಲು ಬಹುತೇಕ ರೈತರಿಗೆ
ಮನಸ್ಸು ಬರದೇ ಎಲ್ಲ ರೀತಿಯಲ್ಲೂ ನಷ್ಟ ಅನುಭವಿಸುವಂತಾಗಿದೆ. ಕಳೆದ ಎರಡು ದಶಕದಲ್ಲಿ ತಾಲೂಕಿನ ಶೇ. 60 ರಷ್ಟು ಭಾಗವನ್ನು ವ್ಯಾಪಿಸಿದೆ. ಹೀಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನ ಸಂಕಷ್ಟಕ್ಕೆ ದೂಡಿದೆ. ತೋಟದಲ್ಲಿ ಇರುವ
ಅಡಕೆ ಮರಕ್ಕೆ ರಸಗೊಬ್ಬರ ನೀಡುವುದು, ಕೊಳೆ ರೋಗಕ್ಕೆ ಬೋರ್ಡೋ ಸಿಂಪಡಣೆ ಮಾಡುವುದು ಅನಿವಾರ್ಯವಾಗಿದೆ.

Advertisement

ಕೈಚೆಲ್ಲಿರುವ ವಿಜ್ಞಾನಿಗಳು: ಅಡಕೆಯ ಹಳದಿ ಎಲೆ ರೋಗಕ್ಕೆ ಹತ್ತಾರು ರೀತಿಯ ಸಂಶೋಧನೆ ನಡೆದಿದ್ದರೂ,ಫಲ ಮಾತ್ರ
ಶೂನ್ಯವಾಗಿದೆ. ಬಹು ವಾರ್ಷಿಕ ಬೆಳೆಯಾದ ಅಡಕೆ ರೋಗಕ್ಕೆ ಔಷ ಧ ಕಂಡು ಹಿಡಿಯಲು ವಿಜ್ಞಾನಿಗಳು ಸಂಪೂರ್ಣ ವಿಫಲವಾಗಿದ್ದಾರೆ. ತೋಟವನ್ನು ನಿರ್ವಹಣೆ ಮಾಡುವುದರ
ಮೂಲಕ ದಕ್ಕಿದಷ್ಟು ಇಳುವರಿ ಪಡೆಯಬೇಕು ಎಂದು ಸೂಚಿಸುತ್ತಾರೆ.

ಖಾಸಗಿ ಗೊಬ್ಬರ ಕಂಪನಿಗಳು ರೈತರ ದುಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ತಮ್ಮ ಕಂಪನಿಯ ಗೊಬ್ಬರ ನೀಡುವುದರಿಂದ
ರೋಗ ಗುಣವಾಗುತ್ತದೆ ಎಂದು ರೈತರನ್ನು ಮೋಸ ಪಡಿಸುತ್ತಿವೆ. ಇದೀಗ ರೈತರು ವಿಜ್ಞಾನಿಗಳು ಅಥವಾ ಗೊಬ್ಬರದ ಕಂಪನಿಯನ್ನು ನಂಬದೇ ಅಡಕೆ ಮರವನ್ನೇ ಕಡಿದು ನೆಲಸಮ ಮಾಡುತ್ತಿದ್ದಾರೆ

ಅಡಕೆ ಮರದಿಂದ ಸಂಪೂರ್ಣ ಆದಾಯ ಕಳೆದುಕೊಂಡಿರುವ
ನಾವು ಅನಿವಾರ್ಯವಾಗಿ ಅಡಕೆ ಮರವನ್ನು ತೋಟದಿಂದ ತೆರವು
ಮಾಡುತ್ತಿದ್ದೇವೆ. ಅಡಕೆ ಮರ ಕಡಿತ ಮಾಡುವುದಕ್ಕೂ ಸಾಕಷ್ಟು
ಖರ್ಚು ಬರುತ್ತಿದ್ದರೂ ಇದರಿಂದ ಕಾಫಿ, ಕಾಳುಮೆಣಸಿನ ಬೆಳೆಗೆ
ಅನುಕೂಲವಾಗಲಿದೆ. ಈಗಾಗಲೇ ಅಡಕೆ ಒಣಗಿಸಲು ಹಾಕುತ್ತಿದ್ದ
ಚಪ್ಪರವನ್ನು ಈ ವರ್ಷದಿಂದ ಹಾಕಿಲ್ಲ. ಇದೀಗ ಅಡಕೆ ಮರ
ಕಡಿದು ಹಾಕಿ ತೋಟವನ್ನು ಬಯಲು ಮಾಡಲಾಗುತ್ತಿದೆ. ಕಾಫಿ ನೆರಳಿಗೆ ಹಾಗೂ ಕಾಳು ಮೆಣಸಿನ ಬಳ್ಳಿ ಹಾಕಲು ಅಗತ್ಯವಾಗಿರುವ ಮರ ಮಾತ್ರ ನೆಡಲಾಗುತ್ತದೆ.
ಪ್ರವೀಣ, ಮರಟೆ, ಶೃಂಗೇರಿ

ಅಡಕೆ ಕೊಳೆ ರೋಗ ಬಂದರೆ ಅದು ಒಂದು ವರ್ಷಕ್ಕೆ
ಸೀಮಿತವಾಗುತ್ತದೆ. ಆದರೆ, ಅಡಕೆ ಹಳದಿ ಎಲೆ ರೋಗ ಬಂದರೆ
ರೈತರು ಶಾಶ್ವತವಾಗಿ ಬೆಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು
ಅನೇಕ ರೈತರ ಜೀವನಕ್ಕೆ ಕುತ್ತಾಗಿದೆ. ಸರಕಾರ ಒಂದು ವರ್ಷ ಬೆಳೆ
ಕಳೆದುಕೊಂಡಾಗ ಅದಕ್ಕೆ ಪರಿಹಾರ ನೀಡುವ ಪ್ರಯತ್ನ ಮಾಡುತ್ತದೆ. ಅಡಕೆ ಹಳದಿ ಎಲೆ ಪೀಡಿತ ರೈತರ ತೋಟಗಳಿಗೆ ಶಾಶ್ವತ ಪರಿಹಾರವನ್ನು ಸರಕಾರ ನೀಡಬೇಕು. ಈ ಬಗ್ಗೆ ಸರಕಾರ ಗಂಭಿರ ಪ್ರಯತ್ನ ನಡೆಸಬೇಕು.
ಕಡೆಮನೆ, ಲಕ್ಷ್ಮೀ ನಾರಾಯಣ,
ಶೃಂಗೇರಿ.

Advertisement

Udayavani is now on Telegram. Click here to join our channel and stay updated with the latest news.

Next