ಹೊನ್ನಾವರ: ಸಾಗರದ ಮಂಗನ ಕಾಯಿಲೆ ಹಾವಳಿಯಿಂದ ಎಚ್ಚೆತ್ತ ಉತ್ತರ ಕನ್ನಡದ ಜನ ಮತ್ತು ಆರೋಗ್ಯ ಇಲಾಖೆ ಕಾಳಜಿ ವಹಿಸಿದ ಕಾರಣ ನಿಯಂತ್ರಣಕ್ಕೆ ಬಂದು ಇಳಿಮುಖವಾಗಿದೆ. ಇನ್ನೂ ಎರಡು ತಿಂಗಳು ವಿಶೇಷ ಕಾಳಜಿ ಅನಿವಾರ್ಯ.
ಈ ಸೀಜನ್‌ನಲ್ಲಿ ಹೊನ್ನಾವರ 11, ಸಿದ್ದಾಪುರ 12, ಕುಮಟಾ 6, ಅಂಕೋಲಾ 1, ಭಟ್ಕಳ 1 ಹೀಗೆ 31ಜನರಲ್ಲಿ ಮಂಗನ ಕಾಯಿಲೆ ವೈರಾಣು ಕಾಣಿಸಿಕೊಂಡಿತ್ತು. ಎಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮಂಗನ ಕಾಯಿಲೆ ಪ್ರದೇಶದ ಆರೋಗ್ಯ ಕೇಂದ್ರಗಳು, ಜಿಲ್ಲಾ ಮಂಗನ ಕಾಯಿಲೆ ವಿಭಾಗ ಈವರೆಗೆ 20 ಸಾವಿರ ಡೋಸ್ ಕಾಯಿಲೆ ನಿರೋಧಕ ಚುಚ್ಚುಮದ್ದು ನೀಡಿದೆ. 38 ಸಾವಿರ ಬಾಟಲ್ ಡಿಎಂಪಿ ತೈಲ ವಿತರಿಸಿದೆ. 53 ಮಂಗಗಳ ಶವ ಪರೀಕ್ಷೆ ಮಾಡಿದೆ. ಜನ ಸಾಕಷ್ಟು ಸ್ಪಂದಿಸಿದ್ದಾರೆ. ಅಧಿಕೃತವಾಗಿ ರಕ್ತ ಪಡೆದು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಖಚಿತಪಟ್ಟರೆ ಮಾತ್ರ ಮಂಗನ ಕಾಯಿಲೆ ಎಂದು ಒಪ್ಪುವುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ. ರಕ್ತ ನೀಡದೆ ಸಿದ್ದಾಪುರದ ಇಬ್ಬರು ಮಂಗಳೂರು ಆಸ್ಪತ್ರೆಯಲ್ಲಿ, ಇನ್ನಿಬ್ಬರು ಸೂಕ್ತ ಚಿಕಿತ್ಸೆ ಪಡೆಯದೆ ಮನೆಯಲ್ಲಿ ಮೃತಪಟ್ಟಿರುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ. ಸರ್ಕಾರಿ ಲೆಕ್ಕದಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಸಾವು ಸಂಭವಿಸಿಲ್ಲ.
ಮಣಿಪಾಲ ವರದಿ: ಸಾಗರ ಆಸುಪಾಸಿನ 314ಜನ ಶಂಕಿತ ಮಂಗನ ಕಾಯಿಲೆ ಪೀಡಿತರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ 12ಜನ 2ನೇ ಬಾರಿ ದಾಖಲಾಗಿದ್ದಾರೆ. ಇದರಲ್ಲಿ 185ಜನರಿಗೆ ಮಂಗನ ಕಾಯಿಲೆ ಇರಲಿಲ್ಲ. 129ಜನರಿಗೆ ಕಾಯಿಲೆ ಇರುವುದು ಖಚಿತಪಟ್ಟಿತ್ತು. ಇವರಲ್ಲಿ 283ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು
ಬಿಡುಗಡೆ ಹೊಂದಿದ್ದಾರೆ. 31ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ.27 ರಂದು ಸಾಗರ ತಾಲೂಕಿನ 60 ವರ್ಷದ ಕಾಣಮ್ಮ ಎಂಬ ಮಹಿಳೆ ಮೃತಪಡುವುದರೊಂದಿಗೆ ಈವರೆಗೆ 9ಜನ ಮೃತಪಟ್ಟಿದ್ದಾರೆ. ಹೊನ್ನಾವರದಲ್ಲಿರುವ ಜಿಲ್ಲಾ ಮಂಗನ ಕಾಯಿಲೆ ಘಟಕಕ್ಕೆ ಡಾ| ಸತೀಶ ಶೇಟ್ ಪೂರ್ಣಾವಧಿ ವೈದ್ಯರಾಗಿ ವರ್ಗಾವಣೆ ಗೊಂಡಿದ್ದಾರೆ. ಪೂರ್ಣಪ್ರಮಾಣದಲ್ಲಿ ಈ ಘಟಕ ಕೆಲಸ ಮಾಡಲು ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಪೆಥೋಲಜಿಸ್ಟ್, ಉಣ್ಣಿ ಸಂಗ್ರಹ ಮತ್ತು ಗ್ರಾಮೀಣ ಭಾಗದಲ್ಲಿ ಔಷಧ ವಿತರಣೆಗೆ ಸಿಬ್ಬಂದಿ ಮತ್ತು ವಾಹನ ಅಗತ್ಯವಿದೆ. ಮುಂದಿನ ವರ್ಷಕ್ಕಾಗಿ 80ಸಾವಿರ ಡೋಸ್ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. 1965ರಲ್ಲಿ ನಿರ್ಮಾಣವಾದ ಅಂದಿನ ಅಡಕೆ ವ್ಯಾಪಾರಿ ಬಿಕ್ಕು ವಾಸುದೇವ ಕಾಮತ್ ತಮ್ಮ ಮಗ ಮಾಧವ ಕಾಮತ್ ನೆನಪಿನಲ್ಲಿ ಕೊಟ್ಟ 15000 ರೂ. ದೇಣಿಗೆಯಿಂದ ನಿರ್ಮಾಣವಾದ 50ವರ್ಷ ಹಳೆಯ ಪುರಾತನ ಹಂಚಿನ ಕಟ್ಟಡದ ಒಂದು ಕೋಣೆಯಲ್ಲಿ ಕಾರ್ಯಾಲಯ ನಡೆಯುತ್ತಿದೆ.
ಮಳೆಗಾಲದಲ್ಲಿ ಸೋರುತ್ತದೆ, ರೀಪುಗಳು ಮುರಿದು ಹೋಗಿವೆ. ಮಂಗನ ಕಾಯಿಲೆ ಸಂಪೂರ್ಣ ನಿವಾರಣೆಯಾಗಲು ಮಳೆಗಾಲದಲ್ಲಿಯೇ ಕಾರ್ಯಾಚರಣೆ ಆರಂಭವಾಗಬೇಕು. ಹಳ್ಳಿಯ ಮನೆಮನೆಗೆ ತೆರಳಿ ದನಗಳ ಮೇಲಿರುವ ಉಣ್ಣಿ ನಿವಾರಣೆಗೆ ಔಷಧ ನೀಡಿ, ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಪೂರ್ತಿ ಉಣ್ಣಿ ನಿವಾರಣೆ ಅಸಾಧ್ಯ. ಆದ್ದರಿಂದ ಮಳೆಗಾಲ ಮುಗಿದೊಡನೆ ಚುಚ್ಚುಮದ್ದು ನೀಡಲು ಆರಂಭಿಸಬೇಕು. ಬೇಸಿಗೆಯಲ್ಲಿ ಕಾಳಜಿ ವಹಿಸಬೇಕು. ಕಾಯಿಲೆ ಕಾಡುವುದು ಬೇಸಿಗೆಗಾದರೂ ವರ್ಷವಿಡೀ ಕೆಲಸ ನಡೆಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಮಂಗನ ಕಾಯಿಲೆಗೆ ಬಿಡುಗಡೆ ಮಾಡಿದ 10ಕೋಟಿ ರೂಪಾಯಿಗಳಲ್ಲಿ 2ಕೋಟಿ ರೂ.ಗಳನ್ನಾದರೂ ತುರ್ತು ಉ.ಕ. ಜಿಲ್ಲಾಸ್ಪತ್ರೆಗೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನವರ್ಷವೂ ಇದೇ ಹಾಡು, ಇದೇ ಪಾಡು.