Advertisement

ರಾಜ್ಯದಲ್ಲಿ ಪ್ರಾಣಿ-ಮಾನವ ಸಂಘರ್ಷ ಪ್ರಮಾಣ ಇಳಿಮುಖ

11:51 PM Aug 18, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಪ್ರಾಣಿ, ಮಾನವ ಸಂಘರ್ಷ ಹತೋಟಿಗೆ ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಾಣಿದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.50 ಇಳಿಕೆ ಕಂಡಿದ್ದರೆ, ಪ್ರಾಣಿ ದಾಳಿ ಪ್ರಕರಣಗಳೂ ಶೇ.30ರಷ್ಟು ಹತೋಟಿಗೆ ಬಂದಿವೆ. ಅರಣ್ಯ ಇಲಾಖೆಯ ತಂತ್ರಜ್ಞಾನಾಧಾರಿತ ಮುಂಜಾಗೃತಾ ಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿಯಿಂದಾಗಿ ಸಂಘರ್ಷ ಹತೋಟಿಗೆ ಬಂದಿದೆ. ಇದರಿಂದ ಸಂತ್ರಸ್ತರಿಗೆ ಅರಣ್ಯ ಇಲಾಖೆ ನೀಡುವ ಪರಿಹಾರ ಧನವು ಕಳೆದ ವರ್ಷ 18 ಕೋಟಿ ರೂ.ನಿಂದ 12 ಕೋಟಿ ರೂ.ಗೆ ಇಳಿಕೆಯಾಗಿದೆ.

Advertisement

ಸಂಘರ್ಷ ಹತೋಟಿಗೆ ಬರಲು ಆನೆ ದಾಳಿಗೆ ಕಡಿವಾಣ ಹಾಕಿರುವುದೇ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಭೂಮಿ ವಿಸ್ತರಣೆ, ಅರಣ್ಯ ಒತ್ತುವರಿ ಹೆಚ್ಚಳ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯದ ಮೇಲೆ ಮಾನವನ ಹಸ್ತಕ್ಷೇಪ, ಆನೆ ಹಾಗೂ ಇತರ ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆ ಹಾಗೂ ಅರಣ್ಯದಲ್ಲಿ ಆಹಾರದ ಕೊರತೆಯಂತಹ ಪ್ರಮುಖ ಕಾರಣಗಳಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಇಂತಹ ದಾಳಿಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕಳೆದ ಎರಡು ವರ್ಷಗಳಿಂದ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿತ್ತು.

ಅವುಗಳಲ್ಲಿ ಪ್ರಮುಖವಾಗಿ ಕಾಡಂಚಿನ ಗ್ರಾಮಗಳಲ್ಲಿ ಸೌರಬೇಲಿ ಅಳವಡಿಕೆ, ಆನೆ ದಾಳಿ ತಡೆಗೆ ಹೆಣ್ಣು ಆನೆಗೆ ರೇಡಿಯೋ ಕಾಲರ್‌ ಅಳವಡಿಕೆ, ಕಂದಕಗಳ ನಿರ್ಮಾಣ, ಉಪಯೋಗಿಸಿದ ರೈಲ್ವೆ ಹಳಿಯಲ್ಲಿ ತಡೆಗೋಡೆಯಂತಹ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಪ್ರಕರಣಗಳು ಸಾಕಷ್ಟು ಹತೋಟಿಗೆ ಬಂದಿವೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸುತ್ತಾರೆ.

ತಂತ್ರಜ್ಞಾನ ಅಳವಡಿಕೆಯಿಂದ ಹತೋಟಿ: ಆನೆ ಸಂತತಿಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಹಿಂದಿನ ಗಣತಿಯಂತೆ 6,000ಕ್ಕೂ ಹೆಚ್ಚು ಆನೆಗಳಿವೆ. ಹೀಗಾಗಿ, ರಾಜ್ಯದಲ್ಲಿ ಆನೆ-ಮಾನವ ಸಂಘರ್ಷವೇ ಹೆಚ್ಚಿದ್ದು, ಒಟ್ಟಾರೆ ದಾಳಿ ಪ್ರಕರಣಗಳಲ್ಲಿ ಆನೆಯಿಂದಾದ ದಾಳಿಗಳು ಶೇ.60ಕ್ಕೂ ಹೆಚ್ಚಿವೆ. ಪ್ರಾಣಿದಾಳಿಯಿಂದ 3 ವರ್ಷಗಳಲ್ಲಿ 108 ಮಂದಿ ಸಾವಿಗೀಡಾಗಿದ್ದರೆ, ಆ ಪೈಕಿ ಆನೆದಾಳಿಯಿಂದಲೇ 72 ಮಂದಿ ಸಾವಿಗೀಡಾಗಿದ್ದಾರೆ.

ಹೀಗಾಗಿ, ರೈಲು ಹಳಿ ತಡೆಗೋಡೆ ನಿರ್ಮಾಣ ಹಾಗೂ ರೇಡಿಯೊ ಕಾಲರ್‌ ತಂತ್ರಜ್ಞಾನ ಬಳಸಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಮುಂದಾಗಿತ್ತು. ಆನೆ ದಾಳಿ ಹೆಚ್ಚು ಕಂಡು ಬರುವ ಹಾಸನ, ಕೊಡಗು, ಚಾಮರಾಜನಗರ ಅರಣ್ಯ ವೃತ್ತದ ಪ್ರದೇಶಗಳಲ್ಲಿ 60 ಕಿ.ಮೀ. ನಷ್ಟು ಅರಣ್ಯದಂಚಿನಲ್ಲಿ ರೈಲು ಹಳಿ ತಡೆಗೋಡೆ ನಿರ್ಮಾಣ ಹಾಗೂ 10ಕ್ಕೂ ಹೆಚ್ಚು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಿ ಯಶಸ್ಸು ಕಂಡು ಕೊಂಡಿದೆ. ಆನೆ ಹಿಂಡಿನಲ್ಲಿ ಸದಾ ಒಂದು ಹೆಣ್ಣಾನೆ ಇರುತ್ತದೆ ಅಥವಾ ಆನೆಗಳು ಹೆಣ್ಣಾನೆ ಹಿಂದೆಯೇ ಸುತ್ತುತ್ತವೆ.

Advertisement

ಹೀಗಾಗಿ, ಗುಂಪಿನ ಒಂದು ಹೆಣ್ಣಾನೆಗೆ ಈ ರೇಡಿಯೊ ಕಾಲರ್‌ ಅಳವಡಿಸಲಾಗಿದೆ. ಇದರಿಂದ ಕಾಡಾನೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾಡಾನೆಗಳ ಇರುವಿಕೆಯ ಬಗ್ಗೆ ಜಿಪಿಎಸ್‌ ಮೂಲಕ ಮೊಬೈಲ್‌ ಆ್ಯಪ್‌ಗೆ ಮಾಹಿತಿ ಸಿಗಲಿದೆ. ಅರಣ್ಯ ಇಲಾಖೆ ಸಮಿಪದ ಕಚೇರಿಯ ಮೂಲಕ ಗ್ರಾಮಸ್ಥರಿಗೆ ಹಾಗೂ ಬೆಳೆಗಾರರಿಗೆ ತಕ್ಷಣ ಮೊಬೈಲ್‌ ಸಂದೇಶ ರವಾನಿಸುತ್ತದೆ. ಜತೆಗೆ ರಾಪಿಡ್‌ ರೆಸ್ಪಾನ್ಸ್‌ ತಂಡ ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಲಿದೆ. ಇನ್ನು ರೇಡಿಯೊ ಕಾಲರ್‌ ಒಂದಕ್ಕೆ 1.8 ಲಕ್ಷ ರೂ. ವೆಚ್ಚವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೃತರ ಕುಟುಂಬಕ್ಕೆ ಪರಿಹಾರ ಹೆಚ್ಚಳವಾಗಲಿಲ್ಲ: ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ ಧನವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿ ಕಳೆದ ವರ್ಷವೇ ಸಭೆ ನಡೆಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕುರಿತು ವನ್ಯಜೀವಿ ಮಂಡಳಿ ಸಭೆಯಲ್ಲಿ ಹಿಂದಿನ ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದ್ದರು. ಮೈತ್ರಿ ಉಳಿಸಿಕೊಳ್ಳುವ ಹೋರಾಟದಲ್ಲಿ ಈ ಪ್ರಸ್ತಾವನೆಗೆ ಇಂದಿಗೂ ಅನುಮೋದನೆ ದೊರೆತಿಲ್ಲ.

ಪ್ರಾಣಿದಾಳಿ ವಿವರ
ವರ್ಷ ಸಾವು ಬೆಳೆ ಹಾನಿ ಒಟ್ಟು ಪ್ರಕರಣಗಳು
2014 -15 53 27,327 29,067
2016-17 48 18,985 21,326
2017-18 38 27,525 30,789
2018-19 25 16,185 19,120

ಪ್ರಾಣಿ ದಾಳಿ ಪ್ರಕರಣಗಳಲ್ಲಿ ಆನೆ ದಾಳಿಯೇ ಹೆಚ್ಚಿತ್ತು. ಆನೆಗಳಿಗೆ ದಾಳಿಯಾಗುವ ಪ್ರದೇಶಗಳನ್ನು ಗುರುತಿಸಿ ರೇಡಿಯೋ ಕಾಲರ್‌ ಅಳವಡಿಕೆ ಮಾಡಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಸಾಕಷ್ಟು ಪ್ರಮಾಣದಲ್ಲಿ ದಾಳಿಗಳು ಹತೋಟಿಗೆ ಬಂದಿವೆ. ಮಾನವ ಸಾವು ಪ್ರಕರಣಗಳು ಕೂಡ ಕುಗ್ಗಿದ್ದು, ಮುಂದಿನ ದಿನಗಳಲ್ಲಿ ಪ್ರಾಣಿದಾಳಿ ತಡೆಗೆ ಮತ್ತಷ್ಟು ತಂತ್ರಜ್ಞಾನವನ್ನು ಅಳವಡಿಸಿ, ಮಾನವ-ಪ್ರಾಣಿ ಸಂಘರ್ಷವನ್ನು ಇನ್ನಷ್ಟು ಕಡಿಮೆ ಮಾಡಲಾಗುವುದು.
-ಸಂಜಯ್‌ ಮೋಹನ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ. (ವನ್ಯಜೀವಿ)

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next