ಮೊರಾದಾಬಾದ್ : ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, 40 ವರ್ಷದ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿ, ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇರಿಸಿ ಇನ್ನೇನು ಮರಣೋತ್ತರ ಪರೀಕ್ಷೆ ಆರಂಭಿಸಬೇಕೆನ್ನುವಷ್ಟರಲ್ಲಿ ಆತ ಜೀವಂತವಾಗಿ ಕಂಡು ಬಂದಿರುವುದು ಕುತೂಹಲಕ್ಕೆ, ಅಚ್ಚರಿಗೆ ಕಾರಣವಾಗಿದೆ.
ಗುರುವಾರ ರಾತ್ರಿ ಅಪಘಾತಕ್ಕೀಡಾದ ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್ ಎನ್ನುವವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಕರ್ತವ್ಯದಲ್ಲಿದ್ದ ವೈದ್ಯರು ಹೃದಯ ಬಡಿತವಿಲ್ಲದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆಬಳಿಕ ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಶವವನ್ನು ಫ್ರೀಜರ್‌ನಲ್ಲಿ ಇರಿಸಲಾಗಿತ್ತು.
ಸುಮಾರು ಏಳು ಗಂಟೆಗಳ ನಂತರ, ಶವಪರೀಕ್ಷೆಗೆ ಒಪ್ಪಿಗೆ ನೀಡಿದ ನಂತರ ಕುಟುಂಬ ಸದಸ್ಯರು ಸಹಿ ಮಾಡಿದ ಪಂಚನಾಮ ಅಥವಾ ದಾಖಲೆಯನ್ನು ಸಲ್ಲಿಸಲು ಪೊಲೀಸರು ಮುಂದಾದಾಗ, ಕುಮಾರ್ ಅವರ ಸೊಸೆ ಮಧು ಬಾಲಾ ಅವರು ಶ್ರೀಕೇಶ್ ಕೈಕಾಲುಗಳಲ್ಲಿ ಚಲನ ವಲನ ಕಂಡು ಜೋರಾಗಿ ಕೂಗಿ ಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, “ಅವರು ಸತ್ತಿಲ್ಲ. …ಅವರು ಉಸಿರಾಡುತ್ತಿದ್ದಾರೆ..ಎಂದು ಬಾಲಾ ಕೂಗಿ ಹೇಳುವುದನ್ನು ಕಾಣಬಹುದಾಗಿದೆ.
“ತುರ್ತು ವೈದ್ಯಕೀಯ ಅಧಿಕಾರಿಯು ರೋಗಿಯನ್ನು ಮುಂಜಾನೆ 3 ಗಂಟೆಗೆ ನೋಡಿದ್ದರು ಮತ್ತು ಹೃದಯ ಬಡಿತ ಇರಲಿಲ್ಲ. ಅವರು ಆ ವ್ಯಕ್ತಿಯನ್ನು ಹಲವಾರು ಬಾರಿ ಪರೀಕ್ಷಿಸಿದರು. ಅದರ ನಂತರ, ಅವರು ಸತ್ತಿದ್ದಾರೆ ಎಂದು ಘೋಷಿಸಲಾಯಿತು ಆದರೆ, ಬೆಳಿಗ್ಗೆ, ಪೊಲೀಸ್ ತಂಡ ಮತ್ತು ಅವರ ಕುಟುಂಬವು ಅವರನ್ನು ಜೀವಂತವಾಗಿ ಕಂಡುಕೊಂಡಿತು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈಗ ಅವರ ಜೀವ ಉಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ನಗ್ನ ವಿಡಿಯೋ ಬ್ಲಾಕ್ ಮೇಲ್!: ಅನಾಮಧೇಯ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಎಚ್ಚರ
ಇದು “ಅತ್ಯಪರೂಪದ ಪ್ರಕರಣಗಳಲ್ಲಿ ಒಂದಾಗಿದೆ.. ಎಲ್ಲಾ ವರದಿಗಳು ಲಭ್ಯವಾಗುವವರೆಗೆ ನಾವು ಅದನ್ನು ನಿರ್ಲಕ್ಷ್ಯ ಎಂದು ಕರೆಯಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿದ್ದಾರೆ.
ಸದ್ಯ, ಶ್ರೀಕೇಶ್ ಮೀರತ್‌ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ಮಾಡಿ ಮೈದುನನನ್ನು ಫ್ರೀಜರ್‌ನಲ್ಲಿ ಹಾಕಿ ಕೊಲ್ಲಲು ಮುಂದಾಗಿದ್ದು, ಅವರ ವಿರುದ್ಧ ದೂರು ದಾಖಲಿಸುತ್ತದೆ ಎಂದು ಅವರ ಅತ್ತಿಗೆ ಹೇಳಿದ್ದಾರೆ.