ಮೊಳಕಾಲ್ಮೂರು: ಲಾಕ್‌ಡೌನ್ ಅವಧಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಪೂರ್ಣ ವೇತನ ಸಿಕ್ಕಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಅಸಂಘಟಿತರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಅಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು ಅಸಂಘಟಿತ ಕಾರ್ಮಿಕರು,
ರೈತರು ಹಾಗೂ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಆತಂಕವಿದೆ. ಆನ್ ಲಾಕ್ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಹೊರಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮುಂತಾದ ಉದ್ಯೋಗ ಭದ್ರತೆಯಿಲ್ಲದ ಶೇ. 70ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾಯಂ ಕಾರ್ಮಿಕರಿಗೆ ವಿಆರ್‌ಎಸ್ ಕೊಟ್ಟು ಕಾರ್ಖಾನೆ ಮುಚ್ಚಿ ಮನೆಗೆ ಕಳುಹಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಜನತೆಯ ಕೈಗೆ ಹಣ ನೀಡುವ ಕೆಲಸ ಆಗಬೇಕಿದೆ. ಅದಕ್ಕಾಗಿ ಅಸಂಘಟಿತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಪೂರ್ಣ ವೇತನವನ್ನು ಖಾತ್ರಿಪಡಿಸಬೇಕು. ಕೋವಿಡ್ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೈಗಾರಿಕಾ ಕಾರ್ಮಿಕರು ಸಹ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಎಸ್‌ಐ ವ್ಯಾಪ್ತಿಯ ಸೋಂಕಿತ ಕಾರ್ಮಿಕರಿಗೆ ಹಾಲಿ 28 ದಿನಗಳ ವೇತನ ಸಹಿತ ರಜೆ ಕ್ವಾರಂಟೈನ್ ಅವಧಿಯ ವೇತನ ಲಭಿಸಲಿದೆ. ಇಎಸ್‌ಐ ವ್ಯಾಪ್ತಿಯಿಂದ ಹೊರಗಿರುವವರಿಗೂ ಈ ಸೌಲಭ್ಯವನ್ನು ವಿಸ್ತರಿಸಿ ದುಡಿಯುವ ಜನರಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಪದಾಧಿ ಕಾರಿಗಳಾದ ಬಿ.ಟಿ. ಪರಮೇಶ್ವರಪ್ಪ, ಚನ್ನಪ್ಪ, ದುರುಗೇಶ್, ಎಲ್. ಅಂಜಿನಪ್ಪ, ಹೊನ್ನೂರಪ್ಪ, ಹನುಮಂತಪ್ಪ, ಸಲೀಂ, ನೀಲಕಂಠಾಚಾರಿ, ವಿಜಯಲಕ್ಷ್ಮೀ, ಪಾರ್ವತಮ್ಮ, ಎಚ್. ಶಿವಮ್ಮ, ಸನಾವುಲ್ಲಾ, ಪಂಪಣ್ಣ, ಗೌರಮ್ಮ, ಬಸಮ್ಮ, ಜ್ಯೋತಿ, ನಾಗರತ್ನಮ್ಮ, ರುಕ್ಮಿಣಿ ಭಾಗವಹಿಸಿದ್ದರು.