Advertisement

Himachal ಮಳೆ ಅವಾಂತರ; ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಕೇಂದ್ರಕ್ಕೆ ಸಿಎಂ ಸುಖು

04:26 PM Aug 18, 2023 | Team Udayavani |

ಹೊಸದಿಲ್ಲಿ: ಹಿಮಾಚಲ ಪ್ರದೇಶ ಸರಕಾರ ಭಾರೀ ಮಳೆಯಿಂದ ಉಂಟಾದ ಭಾರೀ ಪ್ರಮಾಣದ ಪ್ರಾಣ ಮತ್ತು ಆಸ್ತಿ ಹಾನಿಯನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಶುಕ್ರವಾರ ಹೇಳಿದ್ದಾರೆ. ಈ ಸಂಬಂಧ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ಆದಾಗ್ಯೂ, ಇದನ್ನು ”ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಲು ಕೇಂದ್ರ ಸರಕಾರದ ಪ್ರತಿಕ್ರಿಯೆಗಾಗಿ ರಾಜ್ಯವು ಕಾಯುತ್ತಿದೆ.

Advertisement

ಭಾನುವಾರದಿಂದ ಗುಡ್ಡಗಾಡು ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿಮ್ಲಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ.

ಹಲವೆಡೆ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೇಂದ್ರ ತಂಡಗಳು ಹಾನಿಯ ಮೌಲ್ಯಮಾಪನಕ್ಕಾಗಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿವೆ ಮತ್ತು ನಮಗೆ ಕೇಂದ್ರದಿಂದ ಸಮಯೋಚಿತ ಸಹಾಯ ಬೇಕು. ರಾಜ್ಯವು ಅಂದಾಜು 10,000 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದಿದ್ದಾರೆ.

ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದ ಅವಶೇಷಗಳಿಂದ ಮತ್ತೊಂದು ದೇಹವನ್ನು ಮೇಲಕ್ಕೆತ್ತುವುದರೊಂದಿಗೆ, ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 75 ಕ್ಕೆ ಏರಿದೆ. ಈ ಪೈಕಿ 22 ಸಾವುಗಳು ಶಿಮ್ಲಾದ ಮೂರು ಪ್ರಮುಖ ಭೂಕುಸಿತಗಳಲ್ಲಿ ಸಂಭವಿಸಿವೆ.

ಜೂನ್ 24 ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ, ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 217 ಜನರು ಪ್ರಾಣ ಕಳೆದುಕೊಂಡಿದ್ದಾರೆ. 11,301 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.ರಾಜ್ಯದಲ್ಲಿ 506 ರಸ್ತೆಗಳು ಇನ್ನೂ ಬಂದ್ ಆಗಿದ್ದು, 408 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 149 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ. ಕಳೆದ ಮೂರು ದಿನಗಳಲ್ಲಿ ಕಾಂಗ್ರಾ ಜಿಲ್ಲೆಯ ಪ್ರವಾಹ ಪ್ರದೇಶಗಳಲ್ಲಿ 2,074 ಜನರನ್ನು ಸ್ಥಳಾಂತರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next