ಬೆಂಗಳೂರು: ರಾಜ್ಯದ 17 ಜಿಲ್ಲೆಗಳಲ್ಲಿ ಅತೀವ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು ತತ್‌ಕ್ಷಣ ಪರಿಹಾರ ಕಾರ್ಯಗಳಿಗೆ ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗತ್ಯವಾದರೆ ನಾನು ಖುದ್ದಾಗಿ ಪ್ರಧಾನಿ, ಕೇಂದ್ರ ಗೃಹ, ಹಣಕಾಸು ಸಚಿವರನ್ನೂ ಭೇಟಿ ಮಾಡಲು ಸಿದ್ಧ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಯೋಗ ಕೊಂಡೊಯ್ದರೆ ನಮ್ಮ ಪಕ್ಷದಿಂದ ಎಚ್.ಡಿ.ಕುಮಾರಸ್ವಾಮಿ ಸೇರಿ ಶಾಸಕರು-ಸಂಸದರನ್ನು ಕಳುಹಿಸಿಕೊಡಲಿದ್ದೇನೆ ಎಂದು ಹೇಳಿದರು. ಪ್ರವಾಹದಿಂದ ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ, ಬೆಳೆ, ಮೂಲಸೌಕರ್ಯ ನಷ್ಟವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಶೇಷ ನೆರವು ನೀಡಬೇಕೆಂದು ತಿಳಿಸಿದರು.
ಪತ್ರದಲ್ಲೇನಿದೆ?: ರಾಜ್ಯದಲ್ಲಿ ಪ್ರವಾಹದಿಂದ 2 ಕೋಟಿ ಜನಸಂಖ್ಯೆ ಸಂಕಷ್ಟಕ್ಕೆ ಸಿಲುಕಿದೆ. ಹತ್ತು ನದಿಗಳು , 15 ಜಲಾಶಯಗಳು ತುಂಬಿ ನೀರು ಹೊರಗೆ ಬಿಡುತ್ತಿರುವುದರಿಂದ ಸಾವು-ನೋವು, ಬೆಳೆನಷ್ಟ ಉಂಟಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಭೂ ಕುಸಿತದಿಂದ ಸಂಕಷ್ಟ ಎದುರಾಗಿದೆ. ಸಾವಿರಾರು ಕಿ.ಮೀ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ಭಾಗದ ರಸ್ತೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ.
ಪ್ರಾಥಮಿಕ ಅಂದಾಜಿನ ಪ್ರಕಾರವೇ 4.15 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿವೆ. ಜತೆಗೆ, 1702 ಗ್ರಾಮಗಳು ಮುಳುಗಿವೆ. 42 ಮಂದಿ ಸಾವಿಗೀಡಾಗಿದ್ದಾರೆ. 2.18 ಲಕ್ಷ ಮನೆಗಳಿಗೆ ಹಾನಿಯಾಗಿದೆ. 3.15 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇಷ್ಟು ದೊಡ್ಡ ಸಮಸ್ಯೆ ಹಿಂದೆಂದೂ ಆಗಿರಲಿಲ್ಲ. ರಾಜ್ಯ ಸರ್ಕಾರವು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ.
ಒಂದೆಡೆ ರಾಜ್ಯ ಬರದಿಂದ ತತ್ತರಿಸಿತ್ತು, ಇನ್ನೊಂದೆಡೆ ಇದೀಗ ಪ್ರವಾಹದಿಂದ ಸಮಸ್ಯೆಯುಂಟಾಗಿದೆ. ಹೀಗಾಗಿ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಹಾಯಹಸ್ತ ನೀಡಲಿದೆ ಎಂಬ ವಿಶ್ವಾಸವಿದೆ. ಜನರ ಬದುಕು ಕಟ್ಟಿಕೊಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟುಗೂಡಿ ಕೆಲಸ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್‌ನ ಎಲ್ಲ ಶಾಸಕರು ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ. ನನಗೆ ಸಂಬಳ ಬರುವುದಿಲ್ಲ, ಪಿಂಚಣಿ ಮಾತ್ರ ಬರುತ್ತದೆ. ನನ್ನ ಖಾತೆಯಲ್ಲಿ 24 ಲಕ್ಷ ರೂ. ಇದೆ. ಆ ಪೈಕಿ ಎರಡು ಲಕ್ಷ ರೂ.ಗಳನ್ನು ಪರಿಹಾರ ನಿಧಿಗೆ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಟ್ಟಿದ್ದೇನೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ