ಗುಂಡ್ಲುಪೇಟೆ: ಅರಿಶಿಣ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ರೈತ ಸಂಘಟನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೇ ಬೆಂಬಲ ಬೆಲೆ ಘೋಷಣೆಗೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವ ವಿ.ಸೋಮಣ್ಣ ಭೇಟಿ: ಪಟ್ಟಣದ ತಾಲೂಕು ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಹಾಗೂ ಅರಿಶಿಣ ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಈ ವೇಳೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಹೇಶ್ ಪ್ರಭು ಮಾತನಾಡಿ, ಅರಿಶಿನ ಬೆಳೆದ ಖರ್ಚು ಕೂಡ ರೈತರಿಗೆ ಸಿಗುತ್ತಿಲ್ಲ. ಕೃಷಿ ಬೆಲೆ ಆಯೋಗ ನಿಗದಿಪಡಿಸಿದ ಬೆಲೆ ಅವೈಜ್ಞಾನಿಕವಾಗಿದೆ. ಅರಿಶಿನಕ್ಕೆ ಕನಿಷ್ಠ 15 ರಿಂದ 20 ಸಾವಿರ ರೂ. ಇರಬೇಕು. ಅರಿಶಿಣ ಬೆಳೆಗಾರರು ಜೀವನ ನಡೆಸಲು ಆಗುತ್ತಿಲ್ಲ. ಇರುವ ಜಮೀನು ಮಾರುವ ಸ್ಥಿತಿಗೆ ಬಂದಿದೆ. ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಕಾಲ ದೂರವಿಲ್ಲ ಡಬ್ಬಲ್ ಎಂಜಿನ್ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ತುರ್ತಾಗಿ ಅರಿಶಿನಕ್ಕೆ ಬೆಲೆ ನಿಗದಿ ಪಡಿಸಿ: ರೈತ ಸಂಘದ ಕುಂದಕೆರೆ ಸಂಪತ್ತು ಮಾತನಾಡಿ, ಮಾರ್ಚ್ ತಿಂಗಳು ಬರುತ್ತಿದೆ ಬ್ಯಾಂಕ್‌ಗಳಿಗೆ ಸಾಲ ಕಟ್ಟಬೇಕಿರುವ ಕಾರಣ ಅರಿಶಿನಕ್ಕೆ ಬೆಂಬಲ ಬೆಲೆ ಘೋಷಣೆ ಜೊತೆಗೆ ಸರ್ಕಾರವೇ ಅರಿಶಿನ ಖರೀದಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಅರಿಶಿನ ಬೆಳೆಗೆ ಬೆಲೆ ಕಲ್ಪಿಸಲು ಸರ್ಕಾರ ಮಧ್ಯ ಪ್ರವೇಶಿಸಬೇಕು ಅಲ್ಲದೆ ತುರ್ತಾಗಿ ಅರಿಶಿನಕ್ಕೆ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ರೈತರ ಕಷ್ಟ ನನಗೂ ಅರಿವಿದೆ. ನಿಮ್ಮ ಬೇಡಿಕೆ ನನಗೆ ಅರ್ಥವಾಗಿದೆ. ಅರಿಶಿನ ಬೆಲೆ ಏರಿಕೆ ಸಂಬಂಧ ಬರುವ ಬುಧವಾರದೊಳಗೆ ರೈತರ ಸಭೆ ಕರೆಯುವುದಾಗಿ ಭರವಸೆ ನೀಡಿ, ಅರಿಶಿಣ ಬೆಳೆಗೆ ಬೆಂಬಲ ಬೆಲೆ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಕೃಷಿ ಹಾಗೂ ಸಹಕಾರ ಸಚಿವರೊಂದಿಗೆ ಚರ್ಚಿಸಿದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶಿವಪುರ ಮಹದೇವಪ್ಪ, ಅರಿಶಿನ ಬೆಳೆಗಾರರಾದ ಚಿದಾನಂದ, ನೇನೇಕಟ್ಟೆ ಗಂಗಾಧರಪ್ಪ, ಎಚ್.ಎಸ್. ನಂಜುಂಡಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ನೂರಾರು ಮಂದಿ ರೈತರು ಇದ್ದರು.