Advertisement

ಮುಂಗಾರು ಹಂಗಾಮಿನ ಭತ್ತಕ್ಕೆ ಬೆಂಬೆಲೆ ಘೋಷಣೆ

06:19 PM Nov 13, 2021 | Team Udayavani |

ಗಂಗಾವತಿ: ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರು ಕೂಡಲೇ ಭತ್ತ ಖರೀದಿ ಕೇಂದ್ರಗಳಲ್ಲಿ ಮತ್ತು ಕೃಷಿ ಇಲಾಖೆಯಲ್ಲಿ ತಮ್ಮ ಹೆಸರನ್ನು ಭೂಮಿಯ ದಾಖಲಾತಿ ನೀಡಿ ನೋಂದಾಯಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವಿ. ವೆಂಕಟೇಶ ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಎಪಿಎಂಸಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

Advertisement

ಪ್ರಸ್ತುತ ಹಂಗಾಮಿನಲ್ಲಿ ರಾಜ್ಯದಲ್ಲಿ 3.35 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಇದೀಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕಟಾವು ಕಾರ್ಯ  ಆರಂಭವಾಗಿದ್ದು, ಮುಂಗಡವಾಗಿ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಪ್ರೋತ್ಸಾಹಧನವನ್ನು ಘೋಷಣೆ ಮಾಡಿ ರೈತರಿಗೆ ಸಂಬಂಧಪಟ್ಟ ಭತ್ತ ಖರೀದಿ ಕೇಂದ್ರ, ಎಪಿಎಂಸಿ ಮತ್ತು ಕೃಷಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಭತ್ತಕ್ಕೆ ಮುಂಚಿತವಾಗಿ ವೈಜ್ಞಾನಿಕ ಬೆಲೆ ಘೋಷಣೆ ಮಾಡಿ ಭತ್ತ ಕಟಾವಿಗೂ ಮುಂಚೆ ಖರೀದಿ ಕೇಂದ್ರಗಳನ್ನು ಆರಂಭ ಮಾಡುವಂತೆ ರಾಜ್ಯದ ರೈತರು ಸರ್ಕಾರವನ್ನು ಕಳೆದ ಹತ್ತು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರು. ಇದೀಗ ಸರ್ಕಾರ ಭತ್ತ ಕಟಾವಿಗೂ ಮುಂಚೆ ಸಾಮಾನ್ಯ ಭತ್ತ 100 ಕೆ.ಜಿ. ಭರ್ತಿಗೆ 1940 ರೂ. ಗಳನ್ನು ಮತ್ತು ಭತ್ತ ಎ ಗ್ರೇಡ್‌ಗೆ 1960 ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಿದೆ.

ಈಗಾಗಲೇ ಸರ್ಕಾರ ಭರವಸೆ ನೀಡಿದಂತೆ ಮುಂಗಾರು ಭತ್ತ ಕಟಾವಿಗೂ ಮುಂಚೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರು ತಮ್ಮ ಭತ್ತವನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಹಲವು ವರ್ಷಗಳ ಬೇಡಿಕೆಯನ್ನು ಸರಕಾರ ಈಡೇರಿಸಿದ್ದು, ಈ ಬಾರಿ ರೈತರು ಭತ್ತ ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭತ್ತವನ್ನು ಮಾರಾಟ ಮಾಡುವಂತೆ ಶಾಸಕ ಪರಣ್ಣ ಮನವಳ್ಳಿ ಉದಯವಾಣಿಯೊಂದಿಗೆ ಮಾತನಾಡಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next