Advertisement

NDA ಮೈತ್ರಿ ಕುರಿತು ಇನ್ನೂ 2-3 ಸಭೆಗಳ ನಂತರ ನಿರ್ಧಾರ: ಚಿರಾಗ್ ಪಾಸ್ವಾನ್

04:10 PM Jul 09, 2023 | Team Udayavani |

ಪಾಟ್ನಾ: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೋಟಕ್ಕೆ ಮತ್ತೆ ಸೇರ್ಪಡೆಯಾಗುವ ಕುರಿತು ಪಕ್ಷದ ಇನ್ನೂ ಎರಡರಿಂದ ಮೂರು ಸಭೆಗಳನ್ನು ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಲೋಕ ಜನಶಕ್ತಿ ಪಕ್ಷದ (LJP) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಪಾಟ್ನಾದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತ್ಯಾನಂದ ರಾಯ್ ಅವರನ್ನು ಭೇಟಿಯಾದ ಗಂಟೆಗಳ ನಂತರ, ಚಿರಾಗ್ ಪಾಸ್ವಾನ್ ಅವರು 2024 ರ ಲೋಕಸಭೆ ಚುನಾವಣೆಗೆ ಸಂಭವನೀಯ ಮೈತ್ರಿಗಳನ್ನು ಚರ್ಚಿಸಲು ಪಾಟ್ನಾದಲ್ಲಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಬಣದ ಸಭೆಯನ್ನು ಕರೆದಿದ್ದಾರೆ.

ಚಿರಾಗ್ ಪಾಸ್ವಾನ್ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಬಲವಾದ ಸುದ್ದಿಯ ನಡುವೆ ಒಂದಾದ ಮೇಲೊಂದು ಸಭೆಗಳು ನಡೆಯುತ್ತಿವೆ. “ಮೈತ್ರಿಯ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಸಚಿವನಾಗುವುದು ನನ್ನ ಆದ್ಯತೆಯಲ್ಲ” ಎಂದು ಚಿರಾಗ್ ಪಾಸ್ವಾನ್ ದೆಹಲಿಗೆ ತೆರಳುವ ಮೊದಲು ಹೇಳಿದ್ದಾರೆ.

2014 ರಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿದ್ದ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ 7 ಸ್ಥಾನಗಳಲ್ಲಿ ಸ್ಪರ್ಧಿಸಿ 6 ಸ್ಥಾನಗಳಲ್ಲಿ ಗೆದ್ದಿತ್ತು. 2019 ರಲ್ಲೂ 6 ಸ್ಥಾನಗಳನ್ನು ಗೆದ್ದಿತ್ತು.

ಲೋಕ ಜನಶಕ್ತಿ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಚಿರಾಗ್ ಪಾಸ್ವಾನ್ ಐವರು ಬಂಡಾಯ ಸಂಸದರನ್ನು ಪಕ್ಷದಿಂದ ಹೊರಹಾಕಿದ್ದರು. ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪಶುಪತಿ ಕುಮಾರ್ ಪಾರಸ್ ನೇತೃತ್ವದ ಬಣ ಅವರನ್ನು ಪಕ್ಷದ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿತ್ತು. ಪಾರಸ್ ನೇತೃತ್ವದ ಐವರು ಸಂಸದರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದರು. ಆದರೆ, ಚಿರಾಗ್ ಎಲ್‌ಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು ಐವರು ಬಂಡಾಯ ಸಂಸದರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿದ್ದರು.

Advertisement

ಪಾರಸ್ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿದ್ದಾರೆ. ಹಾಜಿಪುರದಿಂದ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು ಲೋಕ ಜನಶಕ್ತಿ ಪಕ್ಷದ ಬಿಹಾರ ಘಟಕದ ರಾಜ್ಯಾಧ್ಯಕ್ಷರೂ ಆಗಿದ್ದರು. ಅವರು ಜೂನ್ 2021 ರಲ್ಲಿ ಚಿರಾಗ್ ಕುಮಾರ್ ಪಾಸ್ವಾನ್ ಬದಲಿಗೆ ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next