Advertisement

ಕಾಂಗ್ರೆಸ್‌ ಬೆಂಬಲಿಸಲು ನಿರ್ಣಯ: ಕಮಕನೂರ

04:17 PM Apr 17, 2019 | Team Udayavani |

ಕಲಬುರಗಿ: ಎಲ್ಲ ವರ್ಗಗಳನ್ನು ಜತೆಗೆ ತೆಗೆದುಕೊಂಡು ಹೋಗುವ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಏ. 18ರಂದು ಮಧ್ಯಾಹ್ನ 3ಕ್ಕೆ ಗಂಗಾನಗರದ ಅಂಬಿಗರ ಚೌಡಯ್ಯ ಸಭಾ ಮಂಟಪದ ಎದರುಗಡೆ ಸ್ಥಳದಲ್ಲಿ ಕೋಲಿ, ಕಬ್ಬಲಿಗ ಹಾಗೂ ಗಂಗಾಮತ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಸಮಾಜದ ಹಿರಿಯ ನಾಯಕ, ಕಾಂಗ್ರೆಸ್‌ ಪಕ್ಷದ ಮುಖಂಡ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.

Advertisement

ಕೋಲಿ ಸಮಾಜದ ಮುಖಂಡರುಗಳೊಂದಿಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಿ ಸಮಾಜದ ಬೆಂಬಲವು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುತ್ತಲೇ ಬಂದಿದೆ. ಆದರೆ ಈ ಸಲ ಮತ ವಿಭಜನೆಯಾಗುತ್ತವೆ ಎಂಬುದಾಗಿ ಹೇಳುವುದನ್ನು ತಳ್ಳಿ ಹಾಕಲು ಸಮಾವೇಶ ಸಂಘಟಿಸಲಾಗಿದೆ. ಈ ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾವೇಶದಲ್ಲಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಾದ ಕೆ.ಬಿ. ಶಾಣಪ್ಪ, ಬಾಬುರಾವ ಚವ್ಹಾಣ, ವಿಧಾನ ಪರಿಷತ್‌ ಸದಸ್ಯರಾದ ಅಲ್ಲಮವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಯು.ಬಿ. ವೆಂಕಟೇಶ ಹಾಗೂ ಇತರ ಶಾಸಕರು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿ 60 ಲಕ್ಷ ಕೋಲಿ ಸಮಾಜದ ಜನಸಂಖ್ಯೆಯಿದ್ದು, ಜಿಲ್ಲೆಯಲ್ಲಿ ನಾಲ್ಕು ಲಕ್ಷ ಸಮೀಪ ಇದ್ದಾರೆ. ಕಾಂಗ್ರೆಸ್‌ ಗೆಲುವಿನಲ್ಲಿ ಸಮಾಜದ ಬೆಂಬಲವೇ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ಈ ಸಲವೂ ಮಲ್ಲಿಕಾರ್ಜುನ ಖರ್ಗೆ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಅರ್ಹತೆಯಿದೆ. ಹೀಗಾಗಿ ರಾಷ್ಟ್ರಮಟ್ಟದ ನಾಯಕರನ್ನು
ಗೆಲ್ಲಿಸುವ ಮುಖಾಂತರ ಈ ಭಾಗದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸುವುದು ಅಗತ್ಯವಾಗಿದೆ ಎಂದರು. ಮಾಜಿ ಸಚಿವ ಬಾಬುರಾವ ಚಿಂಚನಸೂರ ಚುನಾವಣೆ ಬಂದಾಗೊಮ್ಮೆ ಕೋಲಿ ಸಮಾಜ ಪರಿಶಿಷ್ಟ ಜಾತಿ ಸೇರ್ಪಡೆ ಬಗ್ಗೆ ಮಾತನಾಡುತ್ತಾರೆ. ತಮಗೆ ಮಕ್ಕಳು-ಮರಿ ಯಾರೂ ಇಲ್ಲ. ಸಮಾಜವೇ ಮುಖ್ಯವಾಗಿದೆ ಎನ್ನುತ್ತಾರೆ.

Advertisement

ಸಮಾಜಕ್ಕೆ ಅವರ ಕೊಡುಗೆ ಏನು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಎರಡು ಸಲ ಎಸ್ಟಿಗೆ ಸೇರಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಮಾನ್ಯ ಮಾಡದೇ ಎರಡು ಸಲ ವಾಪಸ್ಸು ಕಳುಹಿಸಿದೆ. ಅಂತಹ ಪಕ್ಷಕ್ಕೆ ಈಗ ಚಿಂಚನಸೂರ ಸೇರ್ಪಡೆಯಾಗಿದ್ದಾರೆ. ಸಮಾಜದ ಜನತೆಗೆ ಯಾರಿಗೆ ಬೆಂಬಲಿಸಿದರೆ ಅನುಕೂಲ ಎನ್ನುವ ಮನವರಿಕೆಯಿದೆ. ಎಲ್ಲರಿಗೂ ಈ ವಿಷಯ ತಲುಪಿಸುವ ಅಂಗವಾಗಿ ಸಮಾವೇಶ ಸಂಘಟಿಸಲಾಗಿದೆ ಎಂದು ತಿಳಿಸಿದರು.

11 ಸಲ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಈಗ 12ನೇ ಸಲವೂ ಗೆಲ್ಲಲಿದ್ದಾರೆ. ಕೋಲಿ ಸಮಾಜದ ಸಂಪೂರ್ಣ ಬೆಂಬಲ ಅವರಿಗಿದೆ. ಸಮಾಜಕ್ಕೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರನ್ನು ಆಯ್ಕೆಗೊಳಿಸುವ ಮುಖಾಂತರ ಋಣ ತೀರಿಸಬೇಕಾಗಿದೆ.
ತಿಪ್ಪಣ್ಣಪ್ಪ ಕಮಕನೂರ, ಕೋಲಿ ಸಮಾಜ ಹಾಗೂ ಕಾಂಗ್ರೆಸ್‌ ಮುಖಂಡರು

ಕೋಲಿ ಸಮಾಜದ ಹಿರಿಯ ನಾಯಕ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್‌
ಗೆ ನಾಮನಿರ್ದೇಶನ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಒಮ್ಮತದಿಂದ ನಿರ್ಣಯ ಕೈಗೊಂಡು ಸರ್ಕಾರದಿಂದ ಪ್ರಸ್ತಾವನೆ ಅಂತಿಮವಾಗಿ ಸಂಬಂಧಪಟ್ಟವರಿಗೆ ಸಲ್ಲಿಕೆಯಾಗಿದೆ. ಯಾವುದೇ ಸಂದರ್ಭದಲ್ಲೂ ಒಪ್ಪಿಗೆ ದೊರೆತು ಆದೇಶ ಹೊರ ಬೀಳುವ ಸಾಧ್ಯತೆಗಳಿವೆ.
ರಾಜಗೋಪಾಲರೆಡ್ಡಿ, ಕೋಲಿ ಸಮಾಜ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next