Advertisement

ಮಹದಾಯಿ ನೀರಿಗಾಗಿ ಪಿಐಎಲ್ ಸಲ್ಲಿಸಲು ನಿರ್ಧಾರ

10:38 AM Jul 22, 2019 | Team Udayavani |

ನರಗುಂದ: ಮಹದಾಯಿ ನ್ಯಾಯಾಧೀಕರಣ ನದಿ ನೀರು ಹಂಚಿಕೆಯಾದ ತೀರ್ಪು ಪ್ರಶ್ನಿಸಿ ಪಕ್ಕದ ಗೋವಾ ರಾಜ್ಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಕೂಡ ಸಲ್ಲಿಸಬೇಕಿತ್ತು. ಆದರೆ ಸರ್ಕಾರದಲ್ಲಿ ಅಂತಹ ಪ್ರಯತ್ನ ಕಾಣಿಸುತ್ತಿಲ್ಲ. ಆದ್ದರಿಂದ ರೈತ ಸೇನಾ ಸಂಘಟನೆಯಿಂದಲೇ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.

Advertisement

ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಹೋರಾಟ ವೇದಿಕೆ ಎದುರಿನ ಹುತಾತ್ಮ ರೈತ ದಿ.ಈರಪ್ಪ ಕಡ್ಲಿಕೊಪ್ಪರ ವೀರಗಲ್ಲಿಗೆ ರವಿವಾರ ಮಾಲಾರ್ಪಣೆ ಮಾಡಿದ ಬಳಿಕ 1466ನೇ ದಿನದ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ವಕೀಲರ ತಂಡ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಇನ್ನು ನಾಲ್ಕು ದಿನಗಳೊಳಗಾಗಿ ಪಿಐಎಲ್ ಸಲ್ಲಿಸಲು ನಿರ್ಣಯ ಕೈಗೊಂಡಿದ್ದೇವೆ. ರಾಜ್ಯಪಾಲರ ಭೇಟಿಗೆ ಎಸ್‌ಪಿಗಳಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಅವಕಾಶ ಸಿಕ್ಕರೆ ರಾಜ್ಯಪಾಲರ ಭೇಟಿಯಲ್ಲಿ ಯೋಜನೆ ಸಮಗ್ರ ಚಿತ್ರಣ ತೆರೆದಿಡಲಿದ್ದೇವೆ. ಇದು ತಪ್ಪಿದರೆ ಬೆಂಗಳೂರು ಚಲೋ ಮೂಲಕ ರಾಜಭವನ ಎದುರು ಧರಣಿ ನಡೆಸುವ ನಿರ್ಣಯ ಕೈಗೊಂಡಿದ್ದೇವೆ ಎಂದರು.

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ, ಹನಮಂತ ಮಡಿವಾಳರ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಮುತ್ತಣ್ಣ ಕುರಿ, ವಾಸು ಚವ್ಹಾಣ, ಹನಮಂತ ಕೋರಿ, ಚನ್ನಪ್ಪಗೌಡ ಪಾಟೀಲ, ಲಕ್ಷ್ಮಣ ಮನೇನಕೊಪ್ಪ, ಶಿವಪ್ಪ ಸಾತಣ್ಣವರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹೋರಾಟಗಾರರು, ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next