ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸರಸ್ವತಿ ಹಾಗೂ ಬುದ್ಧ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಉದ್ಭವಿಸಿದ್ದ ವಿವಾದ ತೆರೆಬಿದ್ದಿದ್ದು, ಮೂಲ ಸ್ಥಾನದಲ್ಲೇ ಸರಸ್ವತಿ ದೇವಿಯ ಪ್ರತಿಮೆ ಸ್ಥಾಪಿಸಿ ಪಕ್ಕದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಲು ಆಡಳಿತ ಮಂಡಳಿ ಅಧಿಕೃತ ತೀರ್ಮಾನ ಕೈಗೊಂಡಿದೆ.
ಈ ಹಿಂದೆ ಸ್ಥಾಪಿಸಲಾಗಿದ್ದ ಮೂಲ ಸ್ಥಳದಲ್ಲಿ ಸರಸ್ವತಿ ದೇವಿಯ ಪ್ರತಿಮೆ ಯಥಾಸ್ಥಿತಿಯಲ್ಲಿ ಪ್ರತಿಷ್ಠಾಪಿಸಲಾಗುವುದು, ಅದಕ್ಕೆ ಸಮಾನಂತರವಾಗಿ ಪ್ರತ್ಯೇಕ ಪೀಠವನ್ನು ನಿರ್ಮಿಸಿ ಬುದ್ಧನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಎರಡೂ ಪರತವಿಗ್ರಹಗಳ ತೂಕವನ್ನು ಕಾಯ್ದುಕೊಳ್ಳುವಂತೆ ತಾಂತ್ರಿಕ(ಸಿವಿಲ್) ವ್ಯಕ್ತಿಗಳ ಸಲಹೆ ಪಡೆದು ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬುದ್ಧ ಪ್ರತಿಮೆಗೆ ಪ್ರತ್ಯೇಕ ಪೀಠ ಸ್ಥಾಪಿಸುವ ಅವಶ್ಯಕತೆ ಇರುವುದರಿಂದ ಅಲ್ಲಿಯವರೆಗೂ ಬುದ್ಧನ ಪ್ರತಿಮೆಯನ್ನು ಕಾಪಾಡಿಕೊಳ್ಳುವುದು ಹಾಗೂ ಎರಡು ಪೀಠಗಳ ನಿರ್ಮಾಣದ ನಂತರ ಸರಸ್ವತಿ ದೇವಿ ಮತ್ತು ಬುದ್ಧನ ವಿಗ್ರಹಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸುವ ನಿರ್ಧಾರ ಮಾಡಲಾಗಿದೆ ಎಂದು ಬೆಂವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಶಿಕ್ಷಕರು, ಶಿಕ್ಷಕೇತರ ನೌಕರರು ಮತ್ತು ವಿದ್ಯಾರ್ಥಿಗಳು ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದೆ ಶಾಂತಿ ಮತ್ತು ಸಹನೆಯಿಂದ ಎರಡು ಪ್ರತಿಮೆಯ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ವಿಶ್ವವಿದ್ಯಾಲಯ ಮನವಿ ಮಾಡಿದೆ. ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ವರ್ಗದ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿಯಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಆಡಳಿತ ಮಂಡಳಿಯ ಕಚೇರಿಯ ಮುಖ್ಯದ್ವಾರದ ಒಳಭಾಗದಲ್ಲಿದ್ದ ಸರಸ್ವತಿ ಪ್ರತಿಮೆಯ ಜಾಗದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಗೌತಮ ಬುದ್ಧನ ಪ್ರತಿಮೆಯನ್ನು ಕೆಲವು ಗಂಟೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದು ಯಾಕೆ ಎಂಬುದೂ ವಿವಿಗೆ ಗೊತ್ತಿಲ್ಲ ಮತ್ತು ಪ್ರತಿಷ್ಠಾಪಿಸಿದವರ ವಿರುದ್ಧ ವಿಶ್ವವಿದ್ಯಾಲಯ ಕ್ರಮವೂ ಕೈಗೊಂಡಿಲ್ಲ.
ಮಂಗಳವಾರ ರಾತ್ರಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರು ಸಭೆ ಕರೆದು, ಐದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಐದು ನಿರ್ಧಾರವು ಸರಸ್ವತಿ ಪ್ರತಿಮೆಯ ಜಾಗದಲ್ಲಿ ಬುದ್ಧನ ಪ್ರತಿಮೆ ಇಟ್ಟವರ ಪರವಾಗಿಯೇ ಇದೆ ಎಂದು ದೂರಲಾಗಿದೆ.