ಸ್ಟೇಟ್‌ಬ್ಯಾಂಕ್: ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸುಗಮ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ಪಾಲಿಕೆ ಮಹತ್ವದ ಪರಿಷ್ಕರಣೆ ಮುಂದಾಗಿದೆ.
ಹ್ಯಾಮಿಲ್ಟನ್ ಸರ್ಕಲ್‌ನಿಂದ ಬಂದರು ಪೊಲೀಸ್ ಠಾಣೆ ಕಡೆಗೆ ನೆಲ್ಲಿಕಾಯಿ ರಸ್ತೆಯಲ್ಲಿ ಬರಲು ಮಾತ್ರ ಅವಕಾಶ ನೀಡಲಾಗುವ ಇತ್ತೀಚಿನ ಕ್ರಮವನ್ನು ಕೈಬಿಟ್ಟು, ಬಂದರು ಪೊಲೀಸ್ ಠಾಣೆಯ ಪಕ್ಕದ ಪೆಟ್ರೋಲ್ ಬಂಕ್ ಬಳಿಯಿಂದ ಹ್ಯಾಮಿಲ್ಟನ್ ಸರ್ಕಲ್ ಗೆ ತೆರಳಲು ಮಾತ್ರ ನೆಲ್ಲಿಕಾಯಿ ರಸ್ತೆಯಲ್ಲಿ ಅವಕಾಶ ನೀಡುವುದು, ಹ್ಯಾಮಿಲ್ಟನ್ ಸರ್ಕಲ್ ಭಾಗದಿಂದ ಬಂದರು ವ್ಯಾಪ್ತಿಗೆ ಹೋಗುವವರು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಬಳಿಯಿಂದ ಎಡಕ್ಕೆ ತಿರುಗಿ ಸಂಚರಿಸಲು ಅವಕಾಶ ನೀಡುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಒಂದೆರಡು ದಿನದಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಪಾಲಿಕೆ, ಸಂಚಾರ ಪೊಲೀಸರ ಜತೆಗೆ ಸಭೆ ನಡೆದು ಈ ಕುರಿತ ಅಂತಿಮ ನಿರ್ಧಾರ ಆಗುವ ನಿರೀಕ್ಷೆಯಿದೆ. ಸದ್ಯ ನೆಲ್ಲಿಕಾಯಿ ರಸ್ತೆಯ ಏಕಮುಖ ಸಂಚಾರ ವ್ಯವಸ್ಥೆಯನ್ನು ಬುಧವಾರದಿಂದ ವಾಪಾಸ್ ಪಡೆಯಲಾಗಿದೆ.
ಮೇಯರ್ ಪ್ರೇಮಾನಂದ ಶೆಟ್ಟಿ ಅವರು “ಸುದಿನ’ ಜತೆಗೆ ಮಾತನಾಡಿ, “ನೆಲ್ಲಿಕಾಯಿ ರಸ್ತೆಯಲ್ಲಿ ಏಕಮುಖ ಸಂಚಾರದಿಂದ ಸ್ಥಳೀಯರಿಗೆ ಸಮಸ್ಯೆ ಆಗದ ರೀತಿ ಪರಿಷ್ಕ ರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಒಂದೆರಡು ದಿನದಲ್ಲಿ ಜಿಲ್ಲಾಧಿ ಕಾರಿ ನೇತೃತ್ವದಲ್ಲಿ ಸಭೆ ನಡೆದು ಅಂತಿಮ ತೀರ್ಮಾನವಾಗಲಿದೆ’ ಎಂದರು.
‘ಸ್ಟೇಟ್‌ಬ್ಯಾಂಕ್ -ನೆಲ್ಲಿಕಾಯಿ ರಸ್ತೆ ಏಕಮುಖ; ಸಂಚಾರ ಬದಲಾವಣೆಗೆ ಆಕ್ಷೇಪ’ ಎಂಬ ಬಗ್ಗೆ ಉದಯವಾಣಿ ಸುದಿನ ಜು. 19ರಂದು ವರದಿ ಪ್ರಕಟಿಸಿತ್ತು.
ಸ್ಥಳೀಯರಿಗೆ ಸಂತಸ: ನೆಲ್ಲಿಕಾಯಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ನೆಲೆಯಲ್ಲಿ ಏಕಮುಖ ಸಂಚಾರ ನಿಯಮಾವಳಿಯಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಪಾಲಿಕೆಯಿಂದ ಭರವಸೆ ದೊರೆತಿದೆ. ಸದ್ಯ ಜಾರಿಯಲ್ಲಿದ್ದ ಏಕಮುಖ ಸಂಚಾರವನ್ನು ಕೈಬಿಡಲಾಗಿದೆ. ಈ ಬಗ್ಗೆ ಉದಯವಾಣಿ ಸುದಿನ ಕೂಡ ವರದಿ ಮೂಲಕ ಗಮನಸೆಳೆದಿದೆ. ಸ್ಥಳೀಯರಿಗೆ ಇದರಿಂದ ಸಂತಸವಾಗಿದೆ.-
ಅಬ್ದುಲ್ ಲತೀಫ್, ಸ್ಥಳೀಯ ಕಾರ್ಪೋರೆಟರ್