Advertisement

ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನ

09:17 AM Nov 18, 2017 | |

ವಿಧಾನಸಭೆ: ಮೆಕ್ಕೆಜೋಳಕ್ಕೆ ಷರತ್ತು ರಹಿತವಾಗಿ ಬೆಂಬಲ ಬೆಲೆ ನೀಡುವಂತೆ ಪ್ರಧಾನಿ ಮೇಲೆ ಒತ್ತಡ ಹೇರುವ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಒಟ್ಟಾಗಿ ಪ್ರಯತ್ನ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಶುಕ್ರವಾರ ಶೂನ್ಯ ವೇಳೆಯಲ್ಲಿ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಕುರಿತಂತೆ ಸದಸ್ಯರು ಮಾಡಿದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಸರ್ಕಾರ ತೊಗರಿಗೆ ಬೆಂಬಲ ಬೆಲೆ ನೀಡುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದೇ ರೀತಿ ಗೋವಿನ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 450 ರೂ. ಬೆಂಬಲ ಬೆಲೆ ನೀಡುವುದಾಗಿ ಹೇಳಿದೆ. ಆದರೆ, ಸರ್ಕಾರ ಖರೀದಿಸಿ ಗೋವಿನ ಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ನಿರ್ಬಂಧ ಹೇರಿದ್ದು, , ಇದು ಸಮಸ್ಯೆಯಾಗಿದೆ ಎಂದರು.

ದಕ್ಷಿಣ ಭಾರತದಲ್ಲಿ ಗೋವಿನ ಜೋಳವನ್ನು ಆಹಾರವಾಗಿ ಬಳಕೆ ಮಾಡುವ ಪದ್ಧತಿ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಖರೀದಿ ಮಾಡಿದ ಗೋವಿನ ಜೋಳವನ್ನು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜು ಮಾಡಲು ಕೇಂದ್ರ ಅನುಮತಿ ನೀಡಿದರೆ ಆನುಕೂಲವಾಗುತ್ತದೆ
ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌, ಪ್ರಧಾನಿ ಮೇಲೆ ಒತ್ತಡ ತರುವಂತೆ ಸಲಹೆ ಮಾಡಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕರು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ ನಿರ್ಬಂಧ ತೆರವುಗೊಳಿಸುವಂತೆ ಪ್ರಧಾನಿಯವರ ಮೇಲೆ ಒತ್ತಡ
ತರಬೇಕು ಎಂದು ಮನವಿ ಮಾಡಿದರು. 

ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಪ್ರತಿಕ್ರಿಯಿಸಿ, ರಾಜ್ಯದ ರೈತರ ಹಿತ ದೃಷ್ಠಿಯಿಂದ ನಾವೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ಅದರ ನಡುವೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್‌ ಉಪ ನಾಯಕ ವೈ.ಎಸ್‌.ವಿ.ದತ್ತ ಮಾತನಾಡಿ, ಕೆಲವು ಪ್ರದೇಶದಲ್ಲಿ ಉತ್ತಮ ಬೆಳೆ ಬಂದಿದ್ದು ಮತ್ತೆ ಕೆಲವು ಪ್ರದೇಶದಲ್ಲಿ ಕೀಟದ ಬಾಧೆಯಿಂದ ಬೆಳೆ ಹಾನಿಯಾಗಿದೆ. ಅಲ್ಲಿಯೂ ರೈತರಿಗೆ ಪರಿಹಾರ ಕೊಡಬೇಕು. ಜೆಡಿಎಸ್‌ ರಾಷ್ಟ್ರೀಯ ಆಧ್ಯಕ್ಷ ಎಚ್‌.ಡಿ.ದೇವೇಗೌಡರು ರೈತರ ಹೊಲಗಳಿಗೆ ಹೋಗಿ ವಸ್ತುಸ್ಥಿತಿ ನೋಡಿಕೊಂಡು ಬಂದಿದ್ದಾರೆ ಎಂದಾಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ನೀವು ಹೊಲಗಳಿಗೆ ಹೋಗಿ ಫೋಟೊ ತೆಗೆಸಿಕೊಂಡು ಬಂದರೆ ಏನೂ ಆಗುವುದಿಲ್ಲ. ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂದರು. ಅದಕ್ಕೆ ತಿರುಗೇಟು ನೀಡಿದ ದತ್ತ, ಕಾವೇರಿ ನೀರಿನ ವಿಚಾರದಲ್ಲಿ ದೇವೇಗೌಡರು ಪ್ರಧಾನಿ ಭೇಟಿ ಮಾಡಿ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ. ಮೆಕ್ಕೆಜೋಳಕ್ಕೂ ಪ್ರಧಾನಿಯವರನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯ ಮಾತನಾಡಿ, ದೆಹಲಿಗೆ ಹೋದಾಗ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಎಲ್ಲರೂ ಕೇಂದ್ರದ ಮೇಲೆ ಒತ್ತಡ ಹೇರೋಣ ಎಂದು ಹೇಳಿದರು. 

ದತ್ತನ ಮಾತನ್ನು ದೇವೇಗೌಡರು ಕೇಳ್ಳೋದಿಲ್ವಂತೆ..!
ವಿಧಾನಸಭೆ: “ಏ.. ದತ್ತಾ ಮೊದಲು ಗೌಡರು ನಿನ್ನ ಮಾತು ಕೇಳುತ್ತಿದ್ದರು. ಈಗ ಅಷ್ಟಾಗಿ ಕೇಳುವುದಿಲ್ಲ ಸುಮ್ನಿರಪ್ಪ!’ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ನ ವೈ.ಎಸ್‌.ವಿ.ದತ್ತ ಅವರನ್ನು ಕುರಿತು ಆಡಿದ ಈ ಮಾತು ಸದನದಲ್ಲಿ ಒಂದು ಕ್ಷಣ ನಗೆ ಅಲೆ ಎಬ್ಬಿಸಿತು.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಒತ್ತಡ ಹಾಕಬೇಕು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದಾಗ, “ಆಯ್ತು ಈಗಾಗಲೇ ದೇವೇಗೌಡರು ಮೆಕ್ಕೆಜೋಳ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ಆಲ್ಲಿನ ಜನರ ಸಮಸ್ಯೆ ಆಲಿಸಿ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ನಾನೂ ಅವರಿಗೆ ಮತ್ತಷ್ಟು ಒತ್ತಡ ಹಾಕಲು ಹೇಳುತ್ತೇನೆ’ ಎಂದು ದತ್ತ ಪ್ರತಿಕ್ರಿಯಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ದತ್ತ, ಫೋಟೋ ಹಿಡಿದು ಪತ್ರ ಬರೆಯೋದ್ರಿಂದ ಏನೂ ಆಗುವುದಿಲ್ಲ’ ಎಂದರು. ಅದಕ್ಕೆ ದತ್ತ, “ಪ್ರಧಾನಿಯವರ ಬಳಿ ಹೋಗಲು ದೇವೇಗೌಡರು ಸಿದ್ಧ. ನಾನೂ ಹೇಳುತ್ತೇನೆ’ ಎಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದತ್ತ ನಿಮ್‌ ಗೌಡರು ಮೊದಲು ನಿಮ್ಮ ಮಾತು ಕೇಳುತ್ತಿದ್ದರು. ಈಗ ಕೇಳಲ್ಲ, ಸುಮ್ಮನೆ ಕುಳಿತುಕೊಳ್ಳಪ್ಪಾ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next