ಬೆಳಗಾವಿ: ಧರ್ಮಗುರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಎಂದೇ ಬಳಸಬೇಕೆಂದು ಬಸವಧರ್ಮ ಪೀಠದ ಅಧ್ಯಕ್ಷೆ ಡಾ| ಗಂಗಾಮಾತಾಜಿಯವರು ಸಂದೇಶ ನೀಡಿರುವುದು ಸಮಸ್ತ ಲಿಂಗಾಯತರಿಗೆ ಸಂತಸ ಉಂಟಾಗಿದೆ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.
ಕೂಡಲ ಸಂಗಮದೇವ ಎಂಬ ಅಂಕಿತನಾಮ ಬಳಕೆಯಿಂದ ಬಸವಪರ ಸಂಘಟನೆಗಳಲ್ಲಿದ್ದ ಬಿರುಕು ಮಾಯವಾಗಲಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ತಂದುಕೊಳ್ಳಲು, ಲಿಂಗಾಯತರ ಅಸ್ಮಿತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಡಾ| ಗಂಗಾಮಾತಾಜಿ ಅವರ ಈ ಸಂದೇಶ ಲಿಂಗಾಯತರ ನೈತಿಕ ಬೆಂಬಲವನ್ನು ಹೆಚ್ಚಿಸಿದೆ. ಇದರಿಂದಾಗಿ ನಮಗೆ ಅತ್ಯಂತ ಸಂತೋಷವಾಗಿದೆ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ| ಗಂಗಾಮಾತಾಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶ್ರೀಗಳು ಈ ಮಹತ್ವದ ತೀರ್ಮಾನಕ್ಕಾಗಿ ಅವರಿಗೆ ಕೃತಜ್ಞತೆ ತಿಳಿಸಿ, ತಮ್ಮ ಈ ಹೇಳಿಕೆಯಿಂದ ಲಿಂಗಾಯತ ಪರ ಸಂಘಟನೆಗಳಿಗೆ ಅಭೂತಪೂರ್ವ ಬಲ ಬಂದಂತಾಗಿದೆ ಎಂದಿದ್ದಾರೆ. ಕೆಲವರು ತಮ್ಮ ನಿಲುವನ್ನು ವಿರೋಧಿ ಸಬಹುದಾಗಿದ್ದರೂ ತಾವು ಯಾವುದಕ್ಕೂ ಹೆದರಬೇಕಿಲ್ಲ. ಬಸವ ಮತ್ತು ಲಿಂಗಾಯತ ಪರ ಮಠಾಧಿಧೀಶರೆಲ್ಲರೂ ತಮಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಅವರೆಲ್ಲರ ಬೆಂಬಲ ಸದಾ ತಮ್ಮೊಂದಿಗಿದೆ. ಸಂಕೀರ್ಣ ಸಂದರ್ಭದಲ್ಲಿ ತಮ್ಮ ಸಾಮರಸ್ಯದ ನಿಲುವು ಸರ್ವತ್ರ ಪ್ರಶಂಸನೀಯವಾಗಿದೆ ಎಂದು ತಿಳಿಸಿದ್ದಾರೆ.