Advertisement

ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲು ನಿರ್ಧಾರ

12:23 PM Sep 18, 2018 | Team Udayavani |

ಬೆಂಗಳೂರು: ನಾಡಿನ ಶಿಲ್ಪಕಲೆ ಶ್ರೀಮಂತಿಕೆಯ ಪ್ರತೀಕ ಬೇಲೂರು-ಹಳೆಬೀಡಿನಲ್ಲಿ ಯುವಶಿಲ್ಪಿಗಳು, ವಿನ್ಯಾಸಕಾರರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. 

Advertisement

ಬೇಲೂರು-ಹಳೆಬೀಡಿಗೆ ಹೊಂದಿಕೊಂಡಂತೆ ಸುಮಾರು 13 ಎಕರೆಯಷ್ಟು ಜಾಗ ಇದೆ. ಅಲ್ಲಿ ಯುವ ಕಲಾವಿದರಿಗೆ ಪ್ರತಿಭೆ ಅನಾವರಣಕ್ಕೆ ಅನುವು ಮಾಡಿಕೊಡಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯ ಇರುವ ಅನುಮತಿಗಾಗಿ ಕೇಂದ್ರ ಸರ್ಕಾರದೊಂದಿಗೆ ಖುದ್ದು ಚರ್ಚಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಈ ಶಿಲ್ಪಕಲಾಕೃತಿಗಳು ಇಂದಿನ ಯುವ ಶಿಲ್ಪಿಗಳು ಮತ್ತು ವಿನ್ಯಾಸಕಾರರಿಗೆ ಸವಾಲೊಡ್ಡುವಂತಿವೆ. ಅದಕ್ಕೆ ಪೂರಕ ವಾತಾವರಣ ನಿರ್ಮಿಸಿ, ಸೂಕ್ತ ವೇದಿಕೆ ಕಲ್ಪಿಸುವುದು ಇದರ ಉದ್ದೇಶ. ಈ ಮೂಲಕ ಶಿಲ್ಪಕಲೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುವುದು ಎಂದರು.

ವಿಶ್ವಕರ್ಮ ಸಮುದಾಯವು ಭೂತ, ವರ್ತಮಾನ ಮತ್ತು ಭವಿಷ್ಯ ಸೇರಿದಂತೆ ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ಪರಂಪರಾಗತವಾಗಿ ಬಂದಿರುವ ಈ ಸೃಷ್ಟಿಕರ್ತನನ್ನು ಒಳಗೊಂಡ ಈ ಸಮುದಾಯವು ವಿನ್ಯಾಸ ಮತ್ತು ನಿರ್ಮಾಣ ಕಲೆಗೆ ಮೂರ್ತರೂಪ ಕೊಟ್ಟಿದೆ.

ಇಂತಹ  ಸಮುದಾಯಕ್ಕೆ ಗೌರವ ಸೂಚಿಸುವುದು ಸರ್ಕಾರದ ಕರ್ತವ್ಯ. ಇದನ್ನು ಮನಗಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಕಣಚಾರಿ, ವರ್ಣಶಿಲ್ಪಿ ವೆಂಕಟಪ್ಪ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ಸೃಜನಶೀಲ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದರ ಜತೆಗೆ ಶಿಲ್ಪಕಲಾ ಅಕಾಡೆಮಿ ಸ್ಥಾಪಿಸಿ ಪ್ರತಿ ವರ್ಷ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು. 

Advertisement

ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ. ಪುಟ್ಟರಂಗ ಶೆಟ್ಟಿ ಮಾತನಾಡಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಒಂದು ತಿಂಗಳಲ್ಲಿ ಅದೇ ಸಮುದಾಯ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಈ ಬಾರಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಪೂರಕ ಸ್ಪಂದನೆ ದೊರಕಿದೆ ಎಂದು ಮಹಿತಿ ನೀಡಿದರು. 

ವಿಶ್ವಕರ್ಮ ಏಕದಂಡಿಗಿ ಮಠದ ಪೀಠಾಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಕಾಳಾಚಾರ್‌, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಎಸ್‌.ಪ್ರಭಾಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಮತ್ತಿತರರು ಇದ್ದರು.

ದುಬೈ ಮಾದರಿ ಸೂಪ್‌: ದುಬೈನಲ್ಲಿ ಬೃಹತ್‌ ಚಿನ್ನಾಭರಣಗಳ ಮಾರುಕಟ್ಟೆ “ದುಬೈ ಸೂಪ್‌’ನಲ್ಲಿ ಕೇರಳದ ಮಳಿಗೆಗಳ ಸಂಖ್ಯೆ ಹೆಚ್ಚಿವೆ. ಆ ಮಳಿಗೆಗಳಲ್ಲಿರುವ ಆಭರಣಗಳ ಕುಸುರಿ ಕಲೆ ತಯಾರಾಗಿದ್ದು ದಕ್ಷಿಣ ಕನ್ನಡದಲ್ಲಿ. ಇದು ರಾಜ್ಯದ ಕಲೆಯ ಶ್ರೀಮಂತಿಕೆಗೆ ಹಿಡಿದ ಕನ್ನಡಿ ಎಂದು ಸಚಿವೆ ಜಯಮಾಲ ತಿಳಿಸಿದರು.  ನಮ್ಮಲ್ಲಿ ಪ್ರತಿಭೆಗಳಿವೆ. ಆದರೆ, ಅವುಗಳಿಗೆ ಸೂಕ್ತ ವೇದಿಕೆ ಇಲ್ಲವಾಗಿದೆ. ಸಮುದಾಯದ ಪ್ರಮುಖರು ಮನಸು ಮಾಡಿದರೆ, ರಾಜ್ಯದಲ್ಲೂ ದುಬೈ ಸೂಪ್‌ ಮಾದರಿಯ ಮಾರುಕಟ್ಟೆ ನಿರ್ಮಿಸಬಹುದು. ಇದಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next