ಬೆಂಗಳೂರು: ರಾಜ್ಯದ ಅತೀ ದೊಡ್ಡ ಕೋವಿಡ್ ಆರೈಕೆ ಕೇಂದ್ರ ಎಂದೇ ಪ್ರಸಿದ್ಧಿಗಳಿಸಿದ್ದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿನ (ಬಿಐಇಸಿ) ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟು, ಸೋಂಕಿನ ಲಕ್ಷಣ ಇಲ್ಲದವರ ಆರೈಕೆ ಮಾಡುವ ಉದ್ದೇಶದಿಂದ ಪಾಲಿಕೆಯು ಬಿಐಇಸಿಯಲ್ಲಿ 6,500 ಹಾಸಿಗೆಗಳನ್ನು ಅಂದಾಜು 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಇದರಲ್ಲಿ 3 ಸಾವಿರ ಹಾಸಿಗೆಗಳನ್ನು ಬಳಸಲಾಗುತ್ತಿತ್ತು. ಅದರಲ್ಲಿ ಕೋವಿಡ್ ಸೋಂಕಿತರ ಆರೈಕೆ 1,500 ಹಾಗೂ 1,500 ವೈದ್ಯರು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗೆಂದು ಮೀಸಲಿಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ ಇರುವವರು ಕೋವಿಡ್ ಆರೈಕೆ ಕೇಂದ್ರಕ್ಕೆ ಬರದೆ ಹೋಂ ಐಸೋಲೇಷನ್‍ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರವು ಖಾಲಿಯಾಗುತ್ತಿತ್ತು. ಹೀಗಾಗಿ, ಬಿಐಇಸಿ ಕೋವಿಡ್ ಆರೈಕೆ ಕೇಂದ್ರವನ್ನು ಸೆ.15 ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ಬಿಬಿಎಂಪಿ ವತಿಯಿಂದ ಖರೀದಿಸಲಾಗಿರುವ ಸ್ಟೀಲ್ ಹಾಸಿಗೆಗಳು, ಮ್ಯಾಟ್ರಿಸ್‍ಗಳು, ಫ್ಯಾನ್ಸ್, ಕಸದ ಡಬ್ಬಿ, ಬಕೆಟ್ಸ್ , ಮಗ್ಸ್ ಹಾಗೂ ವಾಟರ್ ಡಿಸ್ಪೆನ್ಸರ್ ಪಿಠೋಪಕರಣಗಳನ್ನು ಸರ್ಕಾರಿ ಸ್ವಾಮ್ಯದ ವಸತಿಗೃಹ , ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ಆದೇಶಿಸಲಾಗಿದೆ .
ಈ ಆರೈಕೆ ಕೇಂದ್ರದಲ್ಲಿರುವ ವಸ್ತುಗಳನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟದಲ್ಲಿನ ಹಾಸ್ಟೆಲ್‍ಗೆ ಒಂದು ಸಾವಿರ ಪೀಠೋಪಕರಣ, ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಹಾಸ್ಟೆಲ್‍ಗಳಿಗೆ 2.500 ಪೀಠೋಪಕರಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ಗೆ ಒಂದು ಸಾವಿರ ಪೀಠೋಪಕರಣ ಹಾಗೂ ಜಿಕೆವಿಕೆಗೆ ಒಂದು ಸಾವಿರ ಪೀಠೋಪಕರಣಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಇನ್ನುಳಿದ ಪೀಠೋಪಕರಣಗಳನ್ನು ಇತರೆ ಸರ್ಕಾರಿ ಆಸ್ಪತ್ರೆ ಮತ್ತು ಹಾಸ್ಟೆಲ್‍ಗಳಿಂದ ಬರುವ ಕೋರಿಕೆಯಂತೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.