ಚನ್ನಮ್ಮನ ಕಿತ್ತೂರ: ತಾಲೂಕಿನ ನಿಚ್ಚಣಕಿ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಜರುಗಿದ ಬಾಬಾಗೌಡ ಪಾಟೀಲರ ಅಭಿಮಾನಿ ಬಳಗದ ಸಭೆಯಲ್ಲಿ ರೈತ ಹೋರಾಟಗಾರ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಸಮಾಧಿ ಬಳಿ ಜು. 21 ರಂದು ರೈತ ಹುತಾತ್ಮ ದಿನ ಆಚರಿಸಲು ಬಾಬಾಗೌಡ ಪಾಟೀಲರ ಅಭಿಮಾನಿ ಬಳಗ ತೀರ್ಮಾನಿಸಿತು.
ಸಭೆಯಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಇತ್ತೀಚಿನ ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋ ಧಿ ಕಾನೂನುಗಳಿಂದ ಕೃಷಿ ವಲಯದ ಮೇಲೆ ಬಹು ದೊಡ್ಡ ಪೆಟ್ಟು ಬೀಳುತ್ತಿದೆ. ಈ ಸಂದರ್ಭದಲ್ಲಿ ರೈತರ ಪರವಾಗಿ ಗಟ್ಟಿ ಧ್ವನಿ ಮೊಳಗಬೇಕಿದೆ. ಈ ದಿಸೆಯಲ್ಲಿ ಪೂರ್ವಿಕರಿಂದ ಬಂದ ರೈತ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹೊಣೆಯನ್ನು ಯುವ ಸಮುದಾಯ ನಿಭಾಯಿಸಬೇಕಿದೆ. ಇನ್ನೊಂದೆಡೆ ಢೋಂಗಿ ರೈತ ಹೋರಾಟಗಾರರಿಂದ ರೈತ ಸಂಘಟನೆಗಳ ಗೌರವಕ್ಕೆ ಧಕ್ಕೆಯಾಗಿದೆ.
ಇದರಿಂದ ಪ್ರಾಮಾಣಿಕ ಹೋರಾಟಗಾರರನ್ನು ಗುರುತಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರೈತರು ಸದಾ ಜಾಗೃತರಾಗಿರಬೇಕು ಎಂದು ವಾಲಿ ಮನವಿ ಮಾಡಿದರು. ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ಬಾಬಾಗೌಡರು ಬಸವತತ್ವದಡಿ ರೈತ ಹೋರಾಟವನ್ನು ಮುನ್ನಡೆಸಿದವರು. ಸರಕಾರಗಳ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕೃಷಿ ವಿರೋ ಧಿ ನೀತಿಗಳ ವಿರುದ್ಧ ಜೀವನವಿಡಿ ಹೋರಾಡಿದವರು. ಅವರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ರೈತ ಚಳುವಳಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಒಂದೇ ಸೂರಿನಡಿ ಹೋರಾಡಲು ಕಾಯೊìàನ್ಮುಖರಾಗಬೇಕಿದೆ ಎಂದರು. ಸಭೆಯಲ್ಲಿ ರೈತ ಮುಖಂಡರಾದ ಸಿದ್ಧನಗೌಡ ಪಾಟೀಲ, ಶಿವಾನಂದ ಹೊಳೆಹಡಗಲಿ, ಶಂಕ್ರಪ್ಪ ಯಡಳ್ಳಿ, ಕಲ್ಲಪ್ಪ ಕುಗಟಿ, ನಿಂಗಪ್ಪ ಹೊನಕುಪ್ಪಿ, ಗಿರೆಪ್ಪ ಪರವಣ್ಣವರ, ಬಸವರಾಜ ಡೊಂಗರಗಾವಿ, ಕಲಗೌಡ ಪಾಟೀಲ, ಈಶಪ್ರಭು ಬಾಬಾಗೌಡ ಪಾಟೀಲ, ಸಿದ್ದು ಕಂಬಾರ, ಶ್ರೀಶೈಲಗೌಡ ಕಮತರ, ಪ್ರೊ.ಎನ್.ಎಸ್.ಗಲಗಲಿ, ರಮೇಶ ಹಂಚಿಮನಿ ಮಾತನಾಡಿದರು, ನಿಂಗಪ್ಪ ನಂದಿ, ಉಳವಪ್ಪ ಒಡೆಯರ, ಸೋಮಲಿಂಗ ಪುರದ, ಶಾಂತಪ್ಪ ದೊಡವಾಡ, ಯಲ್ಲಪ್ಪ ಅವರಾದಿ, ಬಸವರಾಜ ಅಸುಂಡಿ, ಬಸಪ್ಪ ಶೀಗಿಹಳ್ಳಿ, ಮಲ್ಲಿಕಾರ್ಜುನ ಹುಂಬಿ, ಬಸವೇಶ್ವರ ಸಿದ್ಧಸಮುದ್ರ, ಫಕ್ಕೀರಪ್ಪ ದಳವಾಯಿ ಸೇರಿದಂತೆ ಅನೇಕ ಮುಖಂಡರು ಮತ್ತು ಅಭಿಮಾನಿಗಳು ಸಭೆಯಲ್ಲಿದ್ದರು. ರೈತ ಮುಖಂಡ ಅಪ್ಪೇಶ ದಳವಾಯಿ ಸ್ವಾಗತಿಸಿ, ವಂದಿಸಿದರು.