ಬೆಂಗಳೂರು: ಸಂಚಾರ ದಟ್ಟಣೆ ತಗ್ಗಿಸಲು ನಗರದ ಹೊರವಲಯಕ್ಕೆ ಹೊಂದಿಕೊಂಡಂತೆ 30 ಕಿ.ಮೀ ವ್ಯಾಪ್ತಿಯಲ್ಲಿ ನಾಲ್ಕು ಕಡೆ “ಉಪನಗರ ಸಂಪರ್ಕ ವರ್ತುಲ ರಸ್ತೆ’ (ಎಸ್‌ಟಿಆರ್‌ಆರ್) ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) 17ನೇ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ನಗರದ ಗಡಿ ಭಾಗದ 30 ಕಿ.ಮಿ ವ್ಯಾಪ್ತಿಯೊಳಗೆ ಹೊಸಕೋಟೆ, ಹೇರೋಹಳ್ಳಿ, ತಾವರಕೆರೆ ಮತ್ತು ನೆಲಮಂಗಲ ಭಾಗಗಳಲ್ಲಿ ಉಪನಗರ ಸಂಪರ್ಕ ವರ್ತುಲ ರಸ್ತೆ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಈ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಂಚಾರ ದಟ್ಟಣೆ ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ವಾಹನಗಳು ನಗರದೊಳಗೆ ಪ್ರವೇಶಿಸದೇ ಹೊರ ಭಾಗದಿಂದಲೇ ಚಲಿಸಬೇಕು ಎಂಬ ಉದ್ದೇಶದಿಂದ ನಾಲ್ಕು ಕಡೆ ಎಸ್‌ಟಿಆರ್‌ಆರ್ ರಸ್ತೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ರಸ್ತೆಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಅನ್ನುವ ಬಗ್ಗೆ ಸಮಗ್ರ ಯೋಜನಾ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೇ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 800 ಸಿಎ ನಿವೇಶನಗಳನ್ನು ಅಗತ್ಯವಿರುವ ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಬಿಎಂಆರ್‌ಡಿಎ ಅಧಿಕಾರಿಗಳು ಇದ್ದರು.