Advertisement

ಪಂಪ್‌ವೆಲ್‌ ಫ್ಲೈ ಓವರ್‌ ಕೆಳಭಾಗ ಸುಂದರಗೊಳಿಸಲು ನಿರ್ಧಾರ

11:56 AM May 09, 2022 | Team Udayavani |

ಪಂಪ್‌ವೆಲ್‌: ನಗರದ ಮಹತ್ವದ ಪಂಪ್‌ವೆಲ್‌ ಫ್ಲೈ ಓವರ್‌ನ ಕೆಳಭಾಗವನ್ನು ಆಕರ್ಷಣೀಯವಾಗಿ ರೂಪಿಸುವ ಮಹತ್ವದ ಯೋಜನೆ ಕೆಲವೇ ದಿನಗಳಲ್ಲಿ ಸಾಕಾರವಾಗಲಿದೆ.

Advertisement

ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ ವತಿಯಿಂದಲೇ ಫ್ಲೈ ಓವರ್‌ನ ಕೆಳಭಾಗದಲ್ಲಿ ಆಕರ್ಷಣೀಯ ಯೋಜನೆ ರೂಪಿಸಲು ಈಗಾಗಲೇ ನಿರ್ಧರಿ ಸಲಾಗಿದೆ. ಇದರ ಪೂರ್ವಭಾವಿಯಾಗಿ ಫ್ಲೈ ಓವರ್‌ ನ ಕೆಳಭಾಗದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾಮಗಾರಿ ನಡೆಸಲಾಗಿದೆ. ಮುಂದೆ ಪೂರ್ಣವಾಗಿ ಸಮತಟ್ಟು ಮಾಡಿದ ಅನಂತರ ಹಸುರೀಕರಣದ ಮುಖೇನ ಫ್ಲೈ ಓವರ್‌ನ ಕೆಳಭಾಗ ಸುಂದರಗೊಳಿಸಲಾಗಿದೆ. ಈಗಾಗಲೇ ಫ್ಲೈ ಓವರ್‌ನ ಪೂರ್ಣ ಗೋಡೆಯನ್ನು ಕರ್ಣಾಟಕ ಬ್ಯಾಂಕ್‌ ವತಿಯಿಂದ ಸುಂದರಗೊಳಿಸಲಾಗಿದೆ. ಕರ್ಣಾಟಕ ಬ್ಯಾಂಕ್‌ ವತಿ ಯಿಂದ ಫ್ಲೈ ಓವರ್‌ ಕೆಳಭಾಗದ ರಸ್ತೆಯ ನಾಲ್ಕೂ ಬದಿಯಲ್ಲಿ ಹೂಕುಂಡಗಳ ಮೂಲಕ ಅಲಂಕಾರ ಮಾಡಲಾಗುತ್ತದೆ. ಇದರ ಮಧ್ಯಭಾಗದಲ್ಲಿ ಎತ್ತರವಾಗಿ ಮಣ್ಣು ಹಾಕಿ ಹಸುರೀಕರಣದೊಂದಿಗೆ ಸುಂದರಗೊಳಿಸಲಾಗುತ್ತದೆ. ಫ್ಲೈ ಓವರ್‌ನ ಪಿಲ್ಲರ್‌ಗಳಲ್ಲಿ ಆಕರ್ಷಣೀಯ ಚಿತ್ರದ ಮೂಲಕ ಗಮನಸೆಳೆ ಯುವಂತೆ ಮಾಡಲಾಗುತ್ತದೆ. ಈ ಮೂಲಕ ಪಂಪ್‌ವೆಲ್‌ ಫ್ಲೈ ಓವರ್‌ ಪ್ರದೇಶ ಆಕರ್ಷಣೀಯ ಸ್ಥಳವಾಗಿ ರೂಪುಗೊಳ್ಳಲಿದೆ ಎನ್ನುತ್ತಾರೆ ಮೇಯರ್‌ ಪ್ರೇಮಾನಂದ ಶೆಟ್ಟಿ.

ಕೇರಳ ಸಹಿತ ದೇಶದ ವಿವಿಧ ಭಾಗಗಳಿಂದ ನಗರ ಪ್ರವೇಶಕ್ಕೆ ಬಹುಮುಖ್ಯ ಸ್ಥಳ ಪಂಪ್‌ವೆಲ್‌ ಫ್ಲೈ ಓವರ್‌. ಆದರೆ ಫ್ಲೈ ಓವರ್‌ ಕೆಳಭಾಗ ಮಾತ್ರ ನಿರ್ವಹಣೆಯ ಕೊರತೆ ಎದುರಿಸುತ್ತಿತ್ತು. ನಿರಾಶ್ರಿತರ ತಾಣವಾಗಿ ಬದಲಾಗಿತ್ತು. ಗಲೀಜು ಮಾಡಲಾಗುತ್ತಿತ್ತು. ನಗರ ಪ್ರವೇಶಿಸುವವರಿಗೆ ಇಲ್ಲಿನ ಅಸ್ತವ್ಯಸ್ತ ವ್ಯವಸ್ಥೆಗಳನ್ನು ಕಂಡು ಗಲಿಬಿಲಿಗೊಂಡಿದ್ದರು. ಜತೆಗೆ ಸುತ್ತಲೂ ಫ್ಲೆಕ್ಸ್‌ ಗಳೇ ಇಲ್ಲಿ ತುಂಬಿಕೊಂಡಿದ್ದವು. ಇದೆಲ್ಲದಕ್ಕೆ ಪರಿಹಾರವೆಂಬಂತೆ ಇದೀಗ ಸುಂದರಗೊಳಿಸುವ ಮಹತ್ವದ ಯೋಜನೆ ಸಾಕಾರವಾಗುತ್ತಿರುವುದು ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.

ನಗರದ ಉಳಿದ ಫ್ಲೈ ಓವರ್‌ ಕೆಳಗೂ ಅವಕಾಶವಿದೆ!

ಫ್ಲೈ ಓವರ್‌ ಕೆಳಭಾಗ ಚೆಲುವಿಗೆ ಭೂಷಣವಾಗಲಿ’ ಎಂಬ ಶೀರ್ಷಿಕೆಯಲ್ಲಿ ಎ. 5ರಂದು ‘ಉದಯವಾಣಿ ಸುದಿನ’ ಫೋಟೋ ಸ್ಟೋರಿ ಪ್ರಕಟಿಸಿತ್ತು. ಪಂಪ್‌ ವೆಲ್‌, ತೊಕ್ಕೊಟ್ಟು, ಕುಂಟಿಕಾನ, ಕುಲಶೇಖರ ಫ್ಲೈ ಓವರ್‌ ಕೆಳಭಾಗವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಸದ್ಯ ಪಂಪ್‌ವೆಲ್‌ ಸುಂದರೀಕರಣಕ್ಕೆ ತೆರೆದುಕೊಂಡಿದ್ದು, ಉಳಿದ ಫ್ಲೈ ಓವರ್‌ನ ಕೆಳಭಾಗದಲ್ಲಿಯೂ ಸುಂದರಗೊಳಿಸಲು ಅವಕಾಶಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next