Advertisement
ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕ ಅಥವಾ ಶೈಕ್ಷಣಿಕ ವರ್ಷದ ಅಂತ್ಯ ಈ ಪೈಕಿ ಯಾವುದು ಮೊದಲೋ ಅಲ್ಲಿಯವರೆಗೆ 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
Related Articles
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10 ಸಾವಿರ ರೂ. ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 10,500 ರೂ. ಗೌರವಧನ ನಿಗದಿ ಮಾಡಲಾಗಿದೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
Advertisement
ಮಂಜೂರಾದ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು, ಅತಿಥಿ ಶಿಕ್ಷಕರ ನೇಮಕವನ್ನು ಮುಖ್ಯ ಶಿಕ್ಷಕರ ಮೂಲಕವೇ ಮಾಡಬೇಕು, ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶದ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗಳಿಗೆ/ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳು, ದ್ವಿಭಾಷಾ, ಆಂಗ್ಲ ಭಾಷಾ ಮಾಧ್ಯಮದ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ. 100 ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು. ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ ಹುದ್ದೆಗಳಿಗೆ ಖಾಯಂಗೊಂಡ ಶಿಕ್ಷಕರು ವರ್ಗಾವಣೆ ಅಥವಾ ನೇಮಕ ಹೊಂದಿದ್ದಲ್ಲಿ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಬಳಿಕ ತಾಲೂಕಿನಲ್ಲಿ ಅಗತ್ಯಕ್ಕೆ ಅನುಸಾರವಾಗಿ ಹಂಚಿಕೆ ಮಾಡಬೇಕು ಎಂದು ಸರಕಾರ ತಿಳಿಸಿದೆ.