Advertisement

ನಡ್ಸಾಲಿನಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ

02:33 AM Mar 30, 2021 | Team Udayavani |

ಪಡುಬಿದ್ರಿ: ಪಡುಬಿದ್ರಿ ನಡ್ಸಾಲ್‌ ಗ್ರಾಮದ ಸರ್ವೆ ನಂಬ್ರ77/37ರಲ್ಲಿ ಗೊತ್ತುಪಡಿಸಿದ್ದ 0.19 ಎಕರೆ ಸರಕಾರಿ ಜಮೀನಿನಲ್ಲಿನ ನಿರ್ಮಿಸಲು ಉದ್ದೇಶಿಸಿದ್ದ ಪಡುಬಿದ್ರಿ ಗ್ರಾ.ಪಂ.ನ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಘಟಕ ಕಾಮಗಾರಿಯನ್ನು ಅಬ್ಬೇಡಿ ಹಾಗೂ ಸುಜ್ಲಾನ್‌ ಆರ್‌. ಆರ್‌. ಕಾಲನಿ ನಿವಾಸಿಗಳ ತೀವ್ರ ವಿರೋಧದಿಂದಾಗಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ.

Advertisement

ಜಿಲ್ಲಾಧಿಕಾರಿ ಆದೇಶದಂತೆ ಘಟಕ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ.ನಿಂದ ಸೋಮವಾರ ಸಿದ್ಧತೆ ನಡೆಸಲಾಗಿತ್ತು. ಈ ವಿಷಯ ತಿಳಿದ ಅಬ್ಬೇಡಿ ಹಾಗೂ ಸುಜ್ಲಾನ್‌ ಆರ್‌.ಆರ್‌. ಕಾಲನಿ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಪ್ರತಿನಿಧಿಗಳು ಪಂಚಾಯತ್‌ಗೆ ಗ್ರಾಮಸ್ಥರನ್ನು ಆಹ್ವಾನಿಸಿ ಮಾತುಕತೆಗೆ ಮುಂದಾಗಿದ್ದರು. ಈ ವೇಳೆ ಪರಿಸರದಲ್ಲಿಯೇ ಇರುವ ಅಂಗನವಾಡಿಯ ಮಕ್ಕಳಿಗೆ, ಸಿಬಂದಿಗೆ, ಸುತ್ತಲಿನ 500 ನಿವಾಸಿಗಳಿಗೆ ಸಮಸ್ಯೆಯಾಗುವ ಸಾಧ್ಯತೆಯನ್ನು ಹೇಳಿ, ಘಟಕ ನಿರ್ಮಿಸಬಾರದು ಎಂದು ಆಗ್ರಹಿಸಿದರು.

ನೋಟಿಸ್‌ ಬಂದಿಲ್ಲ
ಪ್ರಸ್ತುತ ಗೊತ್ತುಪಡಿಸಿರುವ ಜಮೀನಿನಲ್ಲಿ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸಾರ್ವಜನಿಕ ನೋಟಿಸ್‌ ಪ್ರಕಟಿಸಿದ್ದರೂ ಆಕ್ಷೇಪ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ನಡಾವಳಿಯಲ್ಲಿ ಉಲ್ಲೇಖೀಸಲಾಗಿದ್ದು ಖಂಡನಾರ್ಹ. ಈ ಬಗ್ಗೆ ಸಾರ್ವ ಜನಿಕರಿಗೆ ಯಾವುದೇ ನೋಟಿಸ್‌ ಅಥವಾ ಮಾಹಿತಿ ನೀಡದೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಆದೇಶ ಹೊರಡಿಸಲಾಗಿದೆ. ಆದೇಶವನ್ನು ತತ್‌ಕ್ಷಣ ಹಿಂಪಡೆದು ನಿರ್ಜನ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.

ನಾರಾಯಣ ಶೆಟ್ಟಿ, ಭಾಸ್ಕರ್‌ ಪಡುಬಿದ್ರಿ, ಲೋಕೇಶ್‌ ಕಂಚಿನಡ್ಕ, ಮನೋಜ್‌ ಅಬ್ಬೇಡಿ, ಮೊಹಿಯುದ್ದೀನ್‌, ಉಮಾ ನಾಥ ಕೆ.ಆರ್‌., ನಿಜಾಮುದ್ದೀನ್‌, ಸದಾಶಿವ ಪಡುಬಿದ್ರಿ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮನವೊಲಿಕೆ ಯತ್ನ
ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪದ್ರ ಅವರು ಈ ಬಗ್ಗೆ ಸಮಜಾಯಿಷಿ ನೀಡಲೂ ಮುಂದಾದರೂ ಗ್ರಾಮಸ್ಥರು ಅದಕ್ಕೆ ಒಪ್ಪದೇ ಇದ್ದು, ಠಾಣಾಧಿಕಾರಿ ದಿಲೀಪ್‌ ಮಧ್ಯಸ್ಥಿಕೆ ವಹಿಸಿ ಮಾತುಕತೆ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ತೀವ್ರ ವಿರೋಧವನ್ನು ಮನಗಂಡ ಗ್ರಾ.ಪಂ. ಅಧಿಕಾರಿಗಳು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವವರೆಗೆ ಘಟಕ ನಿರ್ಮಾಣ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡುವುದಾಗಿ ತಿಳಿಸಿದರು. ಜತೆಗೆ ನಿರ್ಧಾರದ ಬಗ್ಗೆ ಹಿಂಬರಹವನ್ನು ಪಿಡಿಒ ಅವರು ಪ್ರತಿಭಟನ ಕಾರರಿಗೆ ನೀಡಿದ್ದು, ಈ ಕಾರಣ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next