ಶೃಂಗೇರಿ: ಕಂದಾಯ ಪರಿಷ್ಕರಣೆ ಬಗ್ಗೆ ಮಾ. 20 ರಂದು ಗ್ರಾಪಂ ವಿಶೇಷ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ರಾಜೇಶ್ ಶೆಟ್ಟಿ ಹೇಳಿದರು.
ವಿದ್ಯಾರಣ್ಯಪುರ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ ಜನರ ಸಮಸ್ಯೆ ಅರಿವಿದ್ದು, ಆದ್ಯತೆ ಮೇಲೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.
ಪಪಂ ಸದಸ್ಯ ಎಚ್.ಎಸ್. ವೇಣುಗೋಪಾಲ್ ಮಾತನಾಡಿ, ಗ್ರಾಮಸ್ಥರು ಮನೆ ನಿರ್ಮಿಸಿಕೊಂಡು ಅದರಲ್ಲಿಯೇ ವಾಸವಿದ್ದರೂ, ಗ್ರಾಪಂ ಅವರಿಗೆ ಕಂದಾಯ ಪರಿಷ್ಕರಣೆ ಮಾಡುವಲ್ಲಿ ವಿಳಂಬ ನೀತಿಮಾಡುತ್ತಿದೆ. ಶೀಘ್ರವೇ ಕಂದಾಯ ಪರಿಷ್ಕರಣೆ ಮಾಡಿ, ಮೇಲ್ಚಾವಣಿ ಪರವಾನಿಗೆ ನೀಡಿ, ಗ್ರಾಮಸ್ಥರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಿಕೊಡಬೇಕು ಎಂದರು.
ತಾಪಂ ಇಒ ಸುದೀಪ್ ಮಾತನಾಡಿ, ಸರಕಾರದ ಆದೇಶದ ಪ್ರಕಾರ 9 ಗ್ರಾಪಂನಲ್ಲಿ ನೂತನವಾಗಿ ಮನೆ ನಿರ್ಮಿಸಿ ವಾಸವಿರುವ ನಿವಾಸಿಗಳಿಗೆ ಕಂದಾಯ ಪರಿಷ್ಕರಣೆ ಮಾಡುವ ಆದೇಶವನ್ನು ಈಗಾಗಲೇ ತಾಪಂ ವತಿಯಿಂದ ನೀಡಲಾಗಿದೆ. ಹಾಗಾಗಿ ಸರಕಾರದ ನಿಬಂಧನೆಗೆ ಒಳಪಟ್ಟು ಕಂದಾಯ ಪರಿಷ್ಕರಣೆ ಹಾಗೂ ಪರವಾನಗಿ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದಕ್ಕೂ ಮುನ್ನ ಗ್ರಾಮಸ್ಥರು ಕಂದಾಯ ಪರಿಷ್ಕರಣೆ ಮಾಡಲು ಒತ್ತಾಯಿಸಿದರು.
ತಾಪಂ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್ ಮಾತನಾಡಿ, ನಿವೇಶನ ನಿವೇಶನರಹಿತರಿಗೆ ನಿವೇಶನ ನೀಡಬೇಕು. ನಿವೇಶನವನ್ನು ಮಂಜೂರು ಮಾಡದೇ ಸಮಸ್ಯೆ ತೀವ್ರವಾಗಿದೆ ಎಂದರು.
ತಾಪಂ ಸದಸ್ಯೆ ಶಿಲ್ಪಾ ಮಂಜುನಾಥ್, ಬಿಜೆಪಿ ಮುಖಂಡರಾದ ರತ್ನಾಕರ್, ನರೇಂದ್ರ ಹೆಗ್ಡೆ, ಪ್ರವೀಣ್ ಪೂಜಾರಿ, ತಿಪ್ಪನಮಕ್ಕಿ ವಿಜಯ, ಸಂಕ್ಲಾಪುರ ಮಂಜುನಾಥ್, ಪಪಂ ಸದಸ್ಯ ರತ್ನಾಕರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಪೇಂದ್ರ ಉಪಸ್ಥಿತರಿದ್ದರು.