ಬೆಂಗಳೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ನೌಕರರ ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆ ಜಾರಿಗಾಗಿ 15 ಸಾವಿರ ಕೋಟಿ ರೂ. ವರೆಗೆ ಓವರ್‌ಡ್ರಾಫ್ಟ್ ಪಡೆಯಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಕೋವಿಡ್ ನಿಯಂತ್ರಣ ಕ್ರಮಗಳಿಗೂ ಸೇರಿ ಮಾಸಿಕ ಸುಮಾರು 10 ಸಾವಿರ ಕೋಟಿ ರೂ. ಅಗತ್ಯವಿದೆ. ಹೀಗಾಗಿ ಓವರ್ ಡ್ರಾಫ್ಟ್ ಅವಕಾಶ ಉಪಯೋಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಜತೆಗೆ, ರಾಜ್ಯ ಸರ್ಕಾರ ಪಡೆಯಬಹುದಾದ ಸಾಲದ ಪ್ರಮಾಣ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ. ಸಾರ್ವಜನಿಕ ಬಾಂಡ್ ಗಳ ಮೂಲಕ ಸಂಪನ್ಮೂಲ ಕ್ರೋಢೀಕರಣದ ಮಾರ್ಗದ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ಎಲ್ಲ ಮೂಲಗಳಿಂದ 14,724 ಕೋಟಿ ರೂ. ಆದಾಯ ಸಂಗ್ರಹವಾಗಬೇಕಿದ್ದರೂ ಶೇ.3ರಷ್ಟು ಮಾತ್ರ ಸಂಗ್ರಹದ ಅಂದಾಜು ಮಾಡಲಾಗಿದೆ.
ಸರ್ಕಾರಿ ನೌಕರರ ವೇತನಕ್ಕೆ 3,107 ಕೋಟಿ ರೂ., ನಿವೃತ್ತ ನೌಕರರ ಪಿಂಚಣಿಗೆ 1,850 ಕೋಟಿ ರೂ.,ಆಡಳಿತಾತ್ಮಕ ವೆಚ್ಚಕ್ಕೆ 261 ಕೋಟಿ ರೂ., ಸಹಾಯಾನುಧಾನಕ್ಕೆ 1650
ಕೋಟಿ ರೂ., ಬದ್ಧ ವೆಚ್ಚಕ್ಕೆ 727 ಕೋಟಿ ರೂ., ಬಡ್ಡಿ ಪಾವತಿಗೆ 1851 ಕೋಟಿ ರೂ. ಕೊರೊನಾ ನಿಯಂತ್ರಣ ಕ್ರಮಗಳಿಗೆ ಪರಿಹಾರಕ್ಕೆ 500 ಕೋಟಿ ರೂ. ಸೇರಿ 9946 ಕೋಟಿ ರೂ.ಗಳ ಅಗತ್ಯ ವಿದೆ. ಕೋವಿಡ್ ಹಿನ್ನಲೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ ಮಾದರಿಯಲ್ಲಿ ಶೇ.10 ರಿಂದ 15 ರಷ್ಟು ಸರ್ಕಾರಿ ನೌಕರರ ವೇತನ ಕಡಿತಕ್ಕೆ ಹಣಕಾಸು ಇಲಾಖೆ ಅಧಿಕಾರಿಗಳು ಪ್ರಸ್ತಾಪ ಇಟ್ಟರೂ ಮುಖ್ಯಮಂತ್ರಿ ಯವರು ಒಪ್ಪಲಿಲ್ಲ ಎನ್ನಲಾಗಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ಇತ್ತೀಚೆಗೆ ಸಂಪುಟ ಸಭೆಯಲ್ಲೂ ಪ್ರಸ್ತಾಪಿಸಿ ಸಹಮತ ಪಡೆದುಕೊಂಡಿದ್ದರು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ. ಈ ಹಿಂದೆಯೂ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಬರ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಓವರ್ ಡ್ರಾಫ್ಟ್ ಪಡೆಯಲಾಗಿತ್ತು. ಹಿಂದೊಮ್ಮೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಾದಾಗ ಪಿಯರ್‌ಲೆಸ್ ಸಂಸ್ಥೆ ಯಿಂದ ಸಾಲ ಪಡೆದಿತ್ತು.
ಎಸ್. ಲಕ್ಷ್ಮಿನಾರಾಯಣ