ರಾಯಚೂರು: ದೇಶಾದ್ಯಂತ ಏ.14ರಂದು ಮೊದಲ ಹಂತದ ಲಾಕ್ ಡೌನ್ ಮುಗಿಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾಡಿದ್ದು, ಇಂದು ಅಥವಾ ನಾಳೆಯೊಳಗೆ ಲಾಕ್ ಡೌನ್ ಮುಂದುವರಿಸಬೇಕೆ ಬೇಡವೇ ಎಂಬ ಬಗ್ಗೆ ಪ್ರಕಟಿಸುವರು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದಿವರಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು. ಚೀನಾದಲ್ಲಿ ಹತೋಟಿಗೆ ಬಂದಿದ್ದ ಕೋವಿಡ್-19 ಸೋಂಕು ಮತ್ತೆ ಶುರುವಾಗಿದೆ. ಇದು ಆತಂಕಕಾರಿ ಸಂಗತಿ ರಾಯಚೂರು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಿಲ್ಲ. ಸದ್ಯಕ್ಕೆ ಈ ವೈರಸ್ ಗೆ ಮದ್ದು ಸಿಕ್ಕಿಲ್ಲ. ತಮ್ಮ ತಮ್ಮ ಮನೆಗಳಲ್ಲಿರುವುದೇ ಮದ್ದು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.
ಪಕ್ಕದ ರಾಜ್ಯಗಳಲ್ಲಿ ಕೋವಿಡ್-19 ವೈರಸ್ ಹೆಚ್ಚಾಗಿದೆ. ಹೀಗಾಗಿ ರಸ್ತೆ ಹಾಗೂ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗುವುದು ಎಂದರು.
ಸಾರಿಗೆ ವ್ಯವಸ್ಥೆ ಪ್ರಾರಂಭಿಸುವ ವಿಚಾರ ಚರ್ಚೆ ನಡೆದಿದೆ. ಲಾಕ್ ಡೌನ್ ಎಲ್ಲಿ ಮಾಡಬೇಕು ಎಲ್ಲಿ ಮಾಡಬಾರದು ಎನ್ನುವ ವಿಚಾರ ಚರ್ಚಿಸಲಾಗುತ್ತಿದೆ. ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲಿ ಸಡಿಲಗೊಳಿಸಬೇಕೆ ಬೇಡವೇ ಎಂದು ಚಿಂತಿಸಲಾಗುವುದು. ರೈತರು ಸದ್ಯದ ಪರಿಸ್ಥಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಳಸಬೇಕು. ರೈತರ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.