Advertisement
ತಾ.ಪಂ. ಸಭಾಂಗಣದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಸೆ. 12ರಂದು ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಎ. ಜಯರಾಮ ಗೌಡ ಅವರು ಕ್ರೀಡಾಂಗಣ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ತಾಲೂಕು ಕ್ರೀಡಾಂಗಣದಲ್ಲಿರುವ ಸರಕಾರಿ ಜಿಮ್‌ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಬರುತ್ತಿದ್ದು, ಶುಲ್ಕ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳಿಗೆ ಮಾಸಿಕ 100 ರೂ. ಶುಲ್ಕ ವಿಧಿಸಿದರೆ ಸಾಕು ಎಂದು ಶಾಸಕ ಮಠಂದೂರು ಸೂಚಿಸಿದರು. ಸಾರ್ವಜನಿಕರಿಗೆ ಮಾಸಿಕ 300 ರೂ. ಶುಲ್ಕ ವಿಧಿಸಲು ನಿರ್ಧರಿಸಲಾಯಿತು.
Related Articles
ಕ್ರೀಡಾಂಗಣದ ಪಶ್ಚಿಮ ಭಾಗದಲ್ಲಿ ಖಾಸಗಿ ವ್ಯಕ್ತಿಗೆ ಸೇರಿರುವ ಜಾಗದ ಮರದ ಕೊಂಬೆ ಮೈದಾನಕ್ಕೆ ಚಾಚಿದ್ದು, ತೆರವು ಮಾಡಲು ವಿನಂತಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಕ್ರೀಡಾಧಿಕಾರಿ ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ಇನ್ನೊಮ್ಮೆ ಗಮನಕ್ಕೆ ತನ್ನಿ. ಪರಿಹಾರ ಕಾಣದಿದ್ದರೆ ನಗರಸಭೆಗೆ ದೂರು ನೀಡಿ ತೆರವು ಮಾಡಿಸಿ ಎಂದು ಶಾಸಕರು ತಿಳಿಸಿದರು. ಮೈದಾನಕ್ಕೆ ದಿನಂಪ್ರತಿ ವಾಕಿಂಗ್, ಅಭ್ಯಾಸಕ್ಕಾಗಿ ಜನರು ಬರುತ್ತಿದ್ದು, ಹುಲ್ಲು ತೆರವು ಮಾಡಬೇಕಿದೆ. ಅದಕ್ಕೆ ಅಗತ್ಯವಾಗಿರುವ ಅನುದಾನದ ಕೊರತೆ ಇರುವ ಬಗ್ಗೆ ಶಾಸಕರ ಗಮನಕ್ಕೆ ತರಲಾಯಿತು. ಮೈದಾನದ ವಿವಿಧ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯೆ ಮೀನಾಕ್ಷಿ ಮಂಜುನಾಥ, ನಗರಸಭೆ ಸದಸ್ಯೆ ಜಗನ್ನಿವಾಸ ರಾವ್, ಅಭಿವೃದ್ಧಿ ಸಮಿತಿಯ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಕುಮಾರ್, ನಿವೃತ್ತ ದೈ.ಶಿ. ಶಿಕ್ಷಕ ಜಗನ್ನಾಥ ರೈ ಮೊದಲಾದವರಿದ್ದರು. ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ವಂದಿಸಿದರು.
Advertisement
ತೆಂಕಿಲದಲ್ಲಿ ಜಾಗ ವೀಕ್ಷಣೆಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಪ್ರತ್ಯೇಕ ಸ್ಥಳ ಗುರುತು ಪ್ರಕ್ರಿಯೆ ಬಗ್ಗೆ ಶಾಸಕರು ಮಾಹಿತಿ ಕೇಳಿದರು. ಉತ್ತರಿಸಿದ ಅಧಿಕಾರಿ, ಕಂದಾಯ ಇಲಾಖೆ ಸೂಚಿಸಿದ ಮೂರು ಕಡೆ ಸ್ಥಳ ವೀಕ್ಷಿಸಿದ್ದು, ತೆಂಕಿಲದಲ್ಲಿ 24 ಎಕ್ರೆ ಜಾಗ ಇದೆ. ಅದು ಸೂಕ್ತವಾಗಿದೆ. ಈಗಿನ ಯೋಜನೆ ಪ್ರಕಾರ 10ರಿಂದ 12 ಎಕ್ರೆ ಜಾಗದ ಆವಶ್ಯಕತೆ ಇದೆ ಎಂದರು. ಶಾಸಕರು ಪ್ರತಿಕ್ರಿಯಿಸಿ, ಕ್ರೀಡಾಂಗಣಕ್ಕೆ 8 ಎಕ್ರೆ ಜಾಗ ನೀಡುವ ಪ್ರಸ್ತಾವನೆ ಇದ್ದು, ಉಳಿದ ಜಾಗ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿದೆ. ಈ ಬಗ್ಗೆ ಚರ್ಚಿಸೋಣ ಎಂದರು. ಕ್ರೀಡಾ ಗ್ರಾಮ ಎಂಬ ಕಲ್ಪನೆಯಡಿ ತಾ| ಕ್ರೀಡಾಂಗಣ ರೂಪಿಸುವುದು ಒಳಿತು ಎಂದು ದೈಹಿಕ ಶಿಕ್ಷಣ ನಿರ್ದೇಶಕ ಸೇಸಪ್ಪ ಗೌಡ, ಯುವಜನ ಇಲಾಖೆಯ ಮಾಜಿ ಕ್ರೀಡಾಧಿಕಾರಿ ಬಿ.ಕೆ. ಮಾಧವ ಮೊದಲಾದವರು ಸಲಹೆ ನೀಡಿದರು.