ಬಜಪೆ: ಎಂ.ಎಸ್.ಇ.ಝಡ್ ಕಾಲನಿನಲ್ಲಿ ನೀರಿನ ಅಭಾವ ಕಂಡು ಬಂದಿದ್ದು ಹಾಗೂ ಇತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಜಪೆ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಮಂಗಳವಾರದಂದು ಮೂಲ್ಕಿ -ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಸಭೆ ನಡೆಯಿತು.
ಕಾಲನಿಯ ನೀರಿನ ಸಮಸ್ಯೆಗೆ ತುರ್ತು ಪರಿಹಾರವಾಗಿ ಮಳವೂರು ವೆಂಟಡ್ ಡ್ಯಾಂನ ನೀರನ್ನು ಹೆಚ್ಚುವರಿ ಒಂದು ಗಂಟೆ ಒವರ್ ಹೆಡ್ ಟ್ಯಾಂಕ್‌ಗೆ ಬಿಡುವ ಮೂಲಕ ನೀರು ಸರಬರಾಜು ಮಾಡಿ ನೀರಿನ ಅಭಾವವನ್ನು ನೀಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. 174 ಮನೆಗಳಿಗೆ 96 ಸಾವಿರ ಲೀಟರ್ ಪೂರೈಕೆಯಾಗುತ್ತಿದ್ದು, ಕೆಲವು ಮನೆಗಳಿಗೆ ನೀರು ಸಮಪರ್ಕವಾಗಿ ಬರದೇ ಇರುವು ದರಿಂದ ಈ ಸಮಸ್ಯೆಯನ್ನು ನೀಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಾಲನಿಯ ಎರಡು ಕೊಳವೆ ಬಾವಿಯನ್ನು ಒಂದು ಕೊಳವೆ ಬಾವಿ ಹಾಳಾಗಿದ್ದು ಇದನ್ನು ತುರ್ತಾಗಿ ಸರಿಪಡಿಸಲು ಸೂಚನೆ ನೀಡಲಾಯಿತು. ಒಂದು ಹೊಸ ಕೊಳವೆಬಾವಿ ಹಾಗೂ ಬದಲಿ ವ್ಯವಸ್ಥೆಗಾಗಿ ಹೊಸ ಪಂಪ್‌ನ್ನು ಖರೀದಿ, ಹೊಸ ಪೈಪ್ ಲೈನ್ ಅಳವಡಿಕೆ ಹಾಗೂ ಕಡ್ಡಾಯವಾಗಿ ಮೀಟರ್ ಅಳವಡಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.
ರಸ್ತೆ, ದಾರಿದೀಪ ತಡೆಗೋಡೆ, ಚರಂಡಿ ರಚನೆ ಕ್ರಿಯಾಯೋಜನೆಯ ಬಗ್ಗೆ ಸಭೆಯಲ್ಲಿ ಪ್ರಾಸ್ತಾವಿಸಲಾಯಿತು. ತಡೆಗೋಡೆ ರಚನೆಗೆ ತುರ್ತಾಗಿ 2 ದಿನದೊಳಗೆ ಕ್ರಿಯಾಯೋಜನೆ ತಯಾರಿಸಿ ನೀಡಬೇಕೆಂದು ಎಂಜಿನಿಯರ್ ವಿಭಾಗಕ್ಕೆ ಸೂಚನೆ ನೀಡಲಾಯಿತು. ಕಾಲನಿಯಲ್ಲಿ ಮೈದಾನಕ್ಕೆ ಈಗಾಗಲೇ 35 ಸೆಂಟ್ಸು ಜಾಗ ಕಾದಿರಿಸಲಾಗಿದೆ. ಗಾರ್ಡ್‌ನ್ ನಿರ್ಮಾಣಕ್ಕೆ ಈಗಾಗಲೇ ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ಕೇಳಲಾಗಿದೆ. ಇದನ್ನು ಅದಷ್ಟು ಬೇಗ ಶುರು ಮಾಡಬೇಕೆಂದು ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ಪಂಗಡ ಕಾಲನಿಯ 5 ಕುಟುಂಬಗಳಿಗೆ ಮನೆ ರಚನೆಗೆ ನಗ ರೋತ್ಥಾನ ಯೋಜನೆಯಲ್ಲಿ ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಬಜಪೆ ಪಂಚಾಯತ್‌ನ ಸಮಯದಲ್ಲಿ ಹಕ್ಕುಪತ್ರಕ್ಕೆ 17 ಮಂದಿಯಲ್ಲಿ 5 ಮಂದಿಯ ಅರ್ಜಿ ತಿರಸ್ಕರಿಸಲಾಗಿದ್ದು ಇದರಲ್ಲಿ 2 ಮಂದಿ ಅಂಗವಿಕಲರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸಭೆಯಲ್ಲಿ ಮನವಿ ಬಂತು. ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡಿ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯವಾಹಕ ಎಂಜಿನಿಯರ್ ನರೇಂದ್ರ, ಎಂ.ಎಸ್.ಇ.ಝಡ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೂರ್ಯ ನಾರಾಯಣ, ನಿಶಾಂತ್, ಯೋಗೀಶ್, ಎಂಜಿನಿಯರ್ ಅಭಿನಂದನ್, ಸುಧೀರ್, ಕಿಶೋರ್, ಸೀತಾರಾಮ್ ಮುಂತಾ ದವರು ಉಪಸ್ಥಿತರಿದ್ದರು. ಬಜಪೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ.ಸ್ವಾಗತಿಸಿದರು. ಪ್ರಭಾರ ಕಿರಿಯ ಎಂಜಿನಿಯರ್ ಪದ್ಮನಾಭ ವಂದಿಸಿದರು.
ಸೌಕರ್ಯ ಒದಗಿಸಲು ಸದಾ ಸಿದ್ದ
ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಎಂ.ಎಸ್. ಇ.ಝಡ್ ಕಾಲನಿಯ ನೀರಿನ ಅಭಾವಕ್ಕೆ ಅಧಿಕಾರಿಗಳು ತುರ್ತು ಸ್ಪಂದನೆ ನೀಡಿ, ಹಾಳಾದ ಕೊಳವೆ ಬಾವಿಯನ್ನು ತುರ್ತು ಸರಿಪಡಿಸಿ, ನೀರಿನ ಲಭ್ಯತೆಯನ್ನು ಹೆಚ್ಚಿಸಲು ಎಂ.ಎಸ್.ಇ .ಝಡ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಪೈಪು ಲೈನ್ ಜತೆಗೆ ಮೀಟರ್ ಅಳವಡಿಸಲು ಕಾಲನಿ ನಿವಾಸಿಗಳಿಗೆ ಸಹಕರಿಸಿ, ಜನರ ಮೂಲ ಸೌಕರ್ಯ ಒದಗಿಸಲು ಸದಾ ಸಿದ್ದ ಎಂದು ಹೇಳಿದರು.