ಬೆಳಗಾವಿ: ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಏಪ್ರಿಲ್ 14 ರಂದು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ| ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಉದ್ಯಾನವನದಲ್ಲಿ ಮುಖ್ಯ ಕಾರ್ಯಕ್ರಮ ಆಯೋಜಿಸಲು ಕಾರ್ಯಕ್ರಮಕ್ಕೆ ಅವಶ್ಯವಿರುವ ಪೆಂಡಾಲ್, ವೇದಿಕೆ, ಆಸನಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕು ಹಾಗೂ ಉದ್ಯಾನವನವನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಲು ಅಂಬೇಡ್ಕರರ ಜೀವನ ಚರಿತ್ರೆ ಹಾಗೂ ಆದರ್ಶಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಉಪನ್ಯಾಸಕರ ಆಯ್ಕೆ ಮಾಡಬೇಕು ಎಂದು ಅಂಬೇಡ್ಕರ್ ಸಂಘಟನೆಯ ಮುಖಂಡರಿಗೆ ಸೂಚಿಸಿದರು.
ಧರ್ಮವೀರ ಸಂಭಾಜಿ ವೃತ್ತದಿಂದ, ಕಿರ್ಲೋಸ್ಕರ್ ರೋಡ್, ರಾಮದೇವ ಗಲ್ಲಿ, ಖಡೆಬಜಾರ್ ಮಾರ್ಗವಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಉದ್ಯಾನವನದ ವರೆಗೆ ರೂಪಕ ವಾಹನಗಳ ಮೆರವಣಿಗೆ ಮಾಡಲಾಗುವುದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಬೆಳಿಗ್ಗೆ ಅಲ್ಪೋಹಾರ ಹಾಗೂ ಕುಡಿಯುವ ನೀರು, ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಕಲಾ ಪ್ರದರ್ಶನಕ್ಕಾಗಿ ಸ್ಥಳೀಯ 10 ಉತ್ತಮ ಕಲಾ ತಂಡಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಉಮಾ ಸಾಲಿಗೌಡರ, ಡಿ.ಸಿ.ಪಿ ರವೀಂದ್ರ ಗಡಾದಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು, ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.