Advertisement

ಡಿಸೆಂಬರ್‌ 1 ವಿಶ್ವ ಏಡ್ಸ್‌ ದಿನಾಚರಣೆ

08:22 PM Nov 27, 2021 | Team Udayavani |

ಜಗತ್ತಿನ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಎಚ್‌.ಐ.ವಿ./ಏಡ್ಸ್‌ ವೈರಸ್‌ಗೆ ಬಾಧಿತರಾಗುವುದರಿಂದ ಉಂಟಾಗುವ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆ ಕುರಿತು ಸಾಮಾನ್ಯ ಜನತೆಯಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಿ ಕಳಂಕ, ತಾರತಮ್ಯವನ್ನು ಹೋಗಲಾಡಿಸುವುದು ಮತ್ತು ಇದರ ಬಗ್ಗೆ ಸಮುದಾಯದ ಅರಿವಿನ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಪ್ರಾರಂಭವಾದ ಈ ವಿಶ್ವ ಏಡ್ಸ್‌ ದಿನಾಚರಣೆಯು ಇಂದು ಮೂವತ್ತಮೂರನೆಯ ಹರೆಯಕ್ಕೆ ಕಾಲಿಡುತ್ತಿದೆ.

Advertisement

ಡಿಸೆಂಬರ್‌ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್‌. ಏಡ್ಸ್‌ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್‌ ದಿನಾಚರಣೆಯನ್ನು ಆಚರಿಸಲು ಮುಂದಾಯಿತು. ಎಚ್‌ಐವಿ/ಏಡ್ಸ್‌ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದೊಂದೇ ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೊಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್‌ಐವಿ ಸೋಂಕಿತರಾಗಿರುವವರಿಗೆ ಬೆಂಬಲನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್‌ಐವಿ ಏಡ್ಸ್‌ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬ ರ ಗಮನ ಸೆಳೆಯುವುದೇ ಇದರ ಮುಖ್ಯ ಧ್ಯೇಯವಾಗಿದೆ.

ಒಮ್ಮೆ ಈ ಸೋಂಕಿಗೆ ಬಲಿಯಾದವರು ತಮ್ಮ ಭಾವೀ ಬದುಕಿನ ಕನಸಿನ ನನಸಿಗಾಗಿ ಜೀವನದುದ್ದಕ್ಕೂ ನಡೆಸುವ ಹೋರಾಟದ ಯಶಸ್ಸಿಗೆ ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ ಎಂಬ ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ಇದಾಗಿದೆ. ಸಮಾಜದಲ್ಲಿ ಎಚ್‌. ಐ.ವಿ. ಭಾದಿತರಾಗಿ ಬದುಕುತ್ತಿರುವವರು ಇತರರಂತೆ ಸಾಮಾನ್ಯ ಬದುಕನ್ನು ನಡೆಸಲು ಅವಕಾಶ ಕಲ್ಪಿಸಿ ಕೊಡುವುದಲ್ಲದೆ ಹೊಸಬರು ಸೊಂಕಿಗೊಳಗಾಗುವುದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಶ್ರಮವಹಿಸಿ ಈ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಭಾಗವಹಿಸುವ ಮೂಲಕ ಪ್ರಗತಿಯತ್ತ ಹೆಜ್ಜೆ ಹಾಕಬೇಕಾಗಿದೆ.

ಪ್ರತೀ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ನಮಗೆ ಒಗ್ಗಟ್ಟಿನಿಂದ ಹೋರಾಡುವ ಅವಕಾಶ ನೀಡಿದೆ. ಈ ರೋಗ ತಡೆಯುವ ಏಕೈಕ ಮಾರ್ಗವೆಂದರೆ ಜಾಗೃತಿ ಮಾತ್ರ. ಇದರ ಕುರಿತು ಎಲ್ಲೆಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ. ಸ್ವಂತ ಅರಿವು ಮತ್ತು ನಂಬಿಕೆಗಳಿಂದಲೇ ಮನಸ್ಸನ್ನು ಬದಲಾಯಿಸಿಕೊಳ್ಳುವಂತೆ ಮಾಡುವುದೇ ಮನವೊಲಿಕೆ. ಮನವೊಲಿಕೆಯು ಮಹತ್ವದ ಪರಿಣಾಮಗಳನ್ನು ರೋಗಪೀಡಿತರು ಮತ್ತು ಇತರರ ಮೇಲೆ ಕ್ಷಿಪ್ರವಾಗಿ ಬೀರಬಲ್ಲದು. ರೋಗದ ಬಗ್ಗೆ ಇರುವ ತಪ್ಪು ಗ್ರಹಿಕೆ, ಮೂಢನಂಬಿಕೆ ಮತ್ತು ಆತಂಕಗಳು ನಿವಾರಣೆಯಾಗಬೇಕು. ಏಡ್ಸ್‌ ರೋಗದ ಬಗ್ಗೆ ಮಾಹಿತಿ ನೀಡುವುದರ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು. ಇದು ಒಂದು ದೃಷ್ಟಿಯಲ್ಲಿ ರೋಗವನ್ನು ನಿರ್ಮೂಲ ಮಾಡುವ ಪರಿಣಾಮಕಾರಿ ಪ್ರಯತ್ನವಾಗಿರುತ್ತದೆ.

ಒಂದು ವೇಳೆ ನಿಮಗೆ ಎಚ್‌.ಐ.ವಿ. ಸೋಂಕು ತಗುಲಿದೆ ಎಂಬ ಶಂಕೆಯು ಉಂಟಾದಲ್ಲಿ ಹೆಚ್‌ಐವಿ ಪರೀಕ್ಷೆ ಮಾಡಿಕೊಳ್ಳುವುದೇ ಉತ್ತಮವಾಗಿರುತ್ತದೆ. ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಒಂದು ವೇಳೆ ನೀವು ಎಚ್‌ಐವಿ ಹೊಂದಿದ್ದರೂ ಕೂಡ ಅನೇಕ ವರ್ಷಗಳವರೆಗೆ ಉತ್ತಮ ಆರೋಗ್ಯದ ಜೀವನವನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ. ನಿಯಮಿತ ತಪಾಸಣೆಗಳ ಮೂಲಕ ವೈದ್ಯರು ನಿಮ್ಮ ಆರೋಗ್ಯವನ್ನು ನಿಯಂತ್ರಿಸಬಹುದಾಗಿದೆ. ನೀವು ಎಚ್‌ಐವಿ ಸೋಂಕು ಹೊಂದಿದ್ದೀರಿ ಎಂದು ತಿಳಿದುಕೊಳ್ಳುವುದರಿಂದ ನಿಮ್ಮ ಮೂಲಕ ಇತರರಿಗೆ ಎಚ್‌ಐವಿ ಹರಡದಂತೆ ಸೂಕ್ತವಾಗಿ ಎಚ್ಚರಿಕೆ ವಹಿಸಿಕೊಳ್ಳಬಹುದು.

Advertisement

ಎಚ್‌ಐವಿ ಸೋಂಕನ್ನು ಪತ್ತೆ ಮಾಡುವುದಕ್ಕಾಗಿ ರಕ್ತ ಪರೀಕ್ಷೆ ಏಕೈಕ ವಿಧಾನವಾಗಿದೆ. ರಕ್ತ ಪರೀಕ್ಷೆಯನ್ನು ಮೆಡಿಕಲ್‌ ಕಾಲೇಜು, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಐಸಿಟಿಸಿ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ.

ಏಡ್ಸ್‌ ದಿನಾಚರಣೆಗೆ ನಾವೇನು ಮಾಡಬೇಕು ?
1. ಬೇರೆ ರೋಗದಂತೆ ಏಡ್ಸ್‌ ಕೂಡ ಒಂದು ರೋಗ. ನಮ್ಮಂತೆ ಅವರು ಮನುಷ್ಯರು. ನಮ್ಮೊಂದಿಗೆ ಅವರಿಗೆ ಬದುಕುವ ಅರ್ಹತೆ ಇದೆ ಎಂಬುವುದನ್ನು ಮನಗಾಣಬೇಕು.
2. ಎಚ್‌ಐವಿ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣದೆ ಅವರಿಗೆ ಏಡ್ಸ್‌ ಬಗ್ಗೆ ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ನೀಡಬೇಕು.
3. ಏಡ್ಸ್‌ ಬಂದರೆ ಸಾವೇ ಗತಿ ಎಂಬ ತಿಳಿ ವಳಿಕೆಯನ್ನು ತಲೆಯಿಂದ ತೆಗೆಯಬೇಕು. ಮೊದಲ ಹಂತದಲ್ಲಿಯೇ ಎಚ್‌ಐವಿ ನಿಯಂತ್ರಿಸಬಹುದು ಎಂಬುದನ್ನು ತಿಳಿಸಬೇಕು.
4. ಏಡ್ಸ್‌ ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ವೈದ್ಯಲೋಕ ಯಶಸ್ವಿ ಆಗಿಲ್ಲ. ಆದರೆ ಇದರ ಬಗ್ಗೆ ಇನ್ನೂ ಅಧ್ಯಯನ ಮುಂದುವರಿದಿದೆ.
5. ಏಡ್ಸ್‌ ಪೀಡಿತರಿಗೆ ಮಾನಸಿಕ ಸ್ಥೈರ್ಯ ತುಂಬಿ ಕೈಲಾದ ಆರ್ಥಿಕ ಸಹಾಯ ಮಾಡಬೇಕು.
6. ಏಡ್ಸ್‌ ಸಂಬಂಧಿತ ಸರಕಾರದ ಎಷ್ಟೋ ಯೋಜನೆಗಳು ಉಚಿತ ಸೇವೆಗಳು ತಲುಪಿಸುವಲ್ಲಿ ಕೈ ಜೋಡಿಸಬೇಕು.
7. ಗ್ರಾಮೀಣ ಭಾಗಗಳನ್ನು ತಲುಪಿ ಜನರಿಗೆ ಜಾಗೃತಿ ಮೂಡಿಸಬೇಕು.

ಡಿ. 1ರಂದು ಪ್ರತಿ ವರ್ಷ ವಿಶ್ವದಾದ್ಯಂತ ಎಚ್‌ಐವಿ ಪೀಡಿತರಿಗಾಗಿ, ಸೋಂಕಿನಿಂದ ಪ್ರಾಣ ತ್ಯಜಿಸಿದವರಿಗಾಗಿ ಆಚರಿಸಲ್ಪಡುವ ದಿನ. ಏಡ್ಸ್‌ ದಿನಾಚರಣೆ ಇದೊಂದು ಮಾನಸಿಕ ಸ್ಥೈರ್ಯ ತುಂಬುವ, ಜಾಗೃತಿ ಮೂಡಿಸುವ ಮತ್ತು ಜನರ ಮೌಡ್ಯತೆಯನ್ನು ಮಟ್ಟ ಹಾಕುವ ದಿನ.
ಒಗ್ಗಟಿನಿಂದ ಬಾಳ್ಳೋಣ. ಏಡ್ಸ್‌ ರೋಗವನ್ನು ತಡೆಯೋಣ.

-ಡಯಾನಾ ಕ್ರಾಸ್ತ
ಐಇಖಇ ವಿಭಾಗ, ಪ್ರಯೋಗ ಶಾಲಾ ತಂತ್ರಜ್ಞರು, ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ

 

Advertisement

Udayavani is now on Telegram. Click here to join our channel and stay updated with the latest news.

Next