ಕಾರ್ಕಳ: ಭಾರತೀಯ ಸೇನೆಯ ಅಧಿಕಾರಿ ಎಂದು ನಂಬಿಸಿ ಗ್ಯಾಸ್ ಏಜೆನ್ಸಿಯೊಂದಕ್ಕೆ ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಕಸಬಾದ ತೆಳ್ಳಾರು ರಸ್ತೆಯಲ್ಲಿರುವ ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಅವರಿಗೆ ಸೆ.9ರಂದು ಕರೆ ಮಾಡಿದ ವ್ಯಕ್ತಿಯೋರ್ವ ಮಾಳ ಕೂಡಬೆಟ್ಟು ಶಾಲೆಯಲ್ಲಿ ಆರ್ಮಿ ಕ್ಯಾಂಪ್ ಮಾಡಿದ್ದು, ಈ ಕ್ಯಾಂಪ್‌ಗೆ 4 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವಂತೆ ಕೇಳಿದ್ದ. ಕೃಷ್ಣಮೂರ್ತಿರವರು ತನ್ನ ಸಂಸ್ಥೆಯ ಸಿಬಂದಿಗೆ ಕರೆ ಮಾಡಿ ಆ ವ್ಯಕ್ತಿಯ ನಂಬರ್‌ಗೆ ಕರೆ ಮಾಡಿ ಮಾತನಾಡುವಂತೆ ತಿಳಿಸಿದ್ದರು.
ಅದರಂತೆ ಸಿಬಂದಿ ಸುನೀಲ್ ವಿನ್ಸೆಂಟ್ ಮೆನೆಜಸ್ ಆ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಗ್ಯಾಸ್ ಸರಬರಾಜು ಮಾಡುವ ಬಗ್ಗೆ ವಿನ್ಸೆಂಟ್‌ರವರ ಮೊಬೈಲ್‌ಗೆ ಕರೆ ಮಾಡಿ ವೆರಿಫೈಗೆಂದು ಹಣ ಹಾಕಬೇಕು ಅನಂತರ ದುಪ್ಪಟ್ಟು ಹಣವನ್ನು ವಾಪಸು ಕೊಡುತ್ತೇವೆಂದು ತಿಳಿಸಿದ್ದ. ಬ್ಯಾಂಕ್ ಖಾತೆಯಿಂದ ಫೋನ್ ಪೇ, ಗೂಗಲ್ ಪೇ ಮೂಲಕ ಹಂತಹಂತವಾಗಿ 4 ಬಾರಿ 92,513 ರೂ. ಹಣವನ್ನು ಕರೆ ಮಾಡಿದ ವ್ಯಕ್ತಿಗೆ ವರ್ಗಾವಣೆ ಮಾಡಿದ್ದು, ಆತ ಇಂಡಿಯನ್ ಆರ್ಮಿಯ ಆಫೀಸರ್ ಎಂದು ನಂಬಿಸಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ.
ಈ ಬಗ್ಗೆ ಸುನೀಲ್ ವಿನ್ಸೆಂಟ್ ಮೆನೆಜಸ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.