ಹೊಸದಿಲ್ಲಿ: ಕಳೆದ ವರ್ಷ ದೇಶದಲ್ಲಿ ಆವರಿಸಿದ್ದ ಕೊರೊನಾ 2ನೇ ಅಲೆ ಹಾಗೂ ಈ ವರ್ಷ ಪುನಃ ಮರುಕಳಿಸಿರುವ ಕೊರೊನಾ ಸ್ಫೋಟದ ನಡುವಿನ ವ್ಯತ್ಯಾಸಗಳನ್ನು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿದೆ.
ಹೊಸದಿಲ್ಲಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಕೊರೊನಾದಿಂದ ಸಾವಿಗೀಡಾದವರ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಹೇಳಿದ್ದಾರೆ ಮತ್ತು ದೇಶದಲ್ಲಿ ಕಾಣಿಸಿಕೊಂಡಿರುವ ಸದ್ಯ ಆಗುತ್ತಿರುವ ಕೊರೊನಾ ಸ್ಫೋಟವನ್ನು ಮೂರನೇ ಅಲೆ ಎಂದು ಅಧಿಕೃತವಾಗಿ ವರ್ಗೀಕರಿಸಿದ್ದಾರೆ.
“ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಗುಜರಾತ್, ಒಡಿಶಾ, ದಿಲ್ಲಿ ಹಾಗೂ ರಾಜಸ್ಥಾನದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಜ. 19ರಂದು ಅಂತ್ಯಗೊಂಡ ವಾರದಲ್ಲಿ 515 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ. 2ನೇ ಅಲೆಯಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಮರಣ ಪ್ರಮಾಣ ಇಳಿಮುಖವಾಗಿದೆ’ ಎಂದು ಹೇಳಿದ್ದಾರೆ.
ಬಹುತೇಕರಿಗೆ ಲಸಿಕೆ: ದೇಶದಲ್ಲಿ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಶೇ. 63ರಷ್ಟು ಆರೋಗ್ಯ ಸಿಬಂದಿ, ಶೇ. 58ರಷ್ಟು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೀರಿದ ಶೇ. 39ರಷ್ಟು ನಾಗರಿಕರು ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ.
12 -14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ. ಕೆ. ಪಾಲ್ ತಿಳಿಸಿದ್ದಾರೆ. ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ 3,17,532 ಹೊಸ ಪ್ರಕರಣಗಳು ದೃಢಪಟ್ಟಿವೆ.