Advertisement

10 ದಿನದಲ್ಲಿ ಸಾಲ ಮನ್ನಾ

08:00 AM Nov 30, 2017 | Harsha Rao |

ಅಹಮದಾಬಾದ್‌: ಗುಜರಾತ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟದ ಕಾವು ದಿನೇ ದಿನೆ ತೀವ್ರಗೊಳ್ಳುತ್ತಿದೆ. ಮೊದಲ ಹಂತದ ಮತದಾನಕ್ಕೆ ಒಂದು ವಾರವಷ್ಟೇ ಬಾಕಿಯಿರುವ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಘಟಾನುಘಟಿಗಳು ರಾಜ್ಯದಲ್ಲಿ ಜಂಡಾ ಹೂಡಿದ್ದಾರೆ. ಬುಧವಾರ ಒಂದೇ ದಿನ ಪ್ರತ್ಯೇಕ ಕಡೆಗಳಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ರ್ಯಾಲಿಗಳನ್ನು ನಡೆಸಿದ್ದಾರೆ.

Advertisement

ಮೋದಿ ಅವರು ಮೋರ್ಬಿ, ಪ್ರಾಚಿ ಮತ್ತು ಪಾಟಿಲಾನಾದಲ್ಲಿ ರ್ಯಾಲಿ ನಡೆಸಿದರೆ, ರಾಹುಲ್‌ ಅವರು ಸೋಮನಾಥ ದೇಗುಲದಿಂದ ಆರಂಭಿಸಿ ಅಮ್ರೇಲಿ, ಭಾವನಗರ, ವಿಸಾವ್‌ದಾರ್‌, ಸಾವರ್‌ ಕುಂಡ್ಲಾಗಳಲ್ಲಿ ಭಾಷಣ ಮಾಡಿದ್ದಾರೆ. ಇನ್ನು ಹಾರ್ದಿಕ್‌ ಮೋರ್ಬಿಯಲ್ಲೇ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವಿಶೇಷವೆಂದರೆ, “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇವಲ 10 ದಿನಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಪ್ರಚಾರ ರ್ಯಾಲಿಯಲ್ಲಿ ರಾಹುಲ್‌ ಘೋಷಿಸಿದ್ದಾರೆ. ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರೆ ಅದು ರೈತರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಹಾಗೂ ನಿಮಗಾಗಿ. ನಿಮಗೆ ಏನು ಬೇಕು ಎಂದು ಕೇಳಿಯೇ, ಅದರಂತೆ ಆಡಳಿತ ನೀಡುತ್ತೇವೆ ಎಂದೂ ಹೇಳಿದ್ದಾರೆ. 

ಜತೆಗೆ ಕಳೆದ 2 ದಶಕಗಳಲ್ಲಿ ಪ್ರಧಾನಿ ಮೋದಿ ಅವರು ಗುಜರಾತ್‌ನ ಗ್ರಾಮಗಳನ್ನು ನಿಮ್ಮಿಂದ ಕಿತ್ತುಕೊಂಡು ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ. “ಮೋದಿ ಅವರು ತಮ್ಮ ರ್ಯಾಲಿಗಳಲ್ಲಿ ಯುವಜನರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಚಕಾರವೆತ್ತುತ್ತಿಲ್ಲ ಏಕೆ’ ಎಂದೂ ಪ್ರಶ್ನಿಸಿದ್ದಾರೆ. 

ಹಾರ್ದಿಕ್‌ ಬಲಪ್ರದರ್ಶನ: ಪ್ರಧಾನಿ ಮೋದಿ ಅವರು ರ್ಯಾಲಿ ನಡೆಸಿದ ಮೋರ್ಬಿಯಿಂದ 30 ಕಿ.ಮೀ. ದೂರದಲ್ಲಿ ಹಾರ್ದಿಕ್‌ ಅವರ ರ್ಯಾಲಿಯೂ ನಡೆಯಿತು. ಬಳಿಕ ರ್ಯಾಲಿಯ ಫೋಟೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ ಅವರು, “ಮೋರ್ಬಿಯಲ್ಲಿ ರೈತರ ಸಮಸ್ಯೆ ಮತ್ತು ಮೀಸಲಾತಿ ಕುರಿತು ಚರ್ಚಿಸಲು ನಡೆಸಿದ್ದ ಸಭೆಗೆ ಸೇರಿದ್ದ ಸಾವಿರಾರು ಮಂದಿಯನ್ನು ನೋಡಿ ನನಗೆ ಸಂತೋಷವಾಯಿತು’ ಎಂದಿದ್ದಾರೆ.

ಪ್ರಚಾರದಿಂದ ಸೋನಿಯಾ ದೂರ
ಗುಜರಾತ್‌ ಚುನಾವಣೆಗೆ ಇನ್ನಿರುವುದು ಕೇವಲ 10 ದಿನ. ಎಲ್ಲ ರಾಜಕೀಯ ಪಕ್ಷಗಳೂ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಮಾತ್ರ ಒಂದು ಬಾರಿಯೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಗುಜರಾತ್‌ನಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಸೋನಿಯಾಗಿರು ವುದು ಕೇವಲ 5 ದಿನಗಳು ಮಾತ್ರ. ಏಕೆಂದರೆ, ಮೊದಲ ಹಂತದ ಮತದಾನ ನಡೆಯುವುದಕ್ಕೆ 4 ದಿನಗಳ ಮುಂಚೆಯೇ ರಾಹುಲ್‌ಗಾಂಧಿ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅನಾರೋಗ್ಯದ ಕಾರಣಕ್ಕಾಗಿ ಸೋನಿಯಾ ಅವರು ಪ್ರಚಾರದ ಹೊಣೆ ಹೊತ್ತುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ನಡೆದ ಹಿಮಾಚಲಪ್ರದೇಶ, ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಚುನಾವಣೆ ಸಂದರ್ಭ ದಲ್ಲೂ ಅವರು ಪ್ರಚಾರದ ಗೋಜಿಗೆ ಹೋಗಿರಲಿಲ್ಲ. ಇದೇ ವೇಳೆ, ರಾಹುಲ್‌ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಡಿ.4ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಕೇಂದ್ರದ ಮಾಜಿ ಸಚಿವ ಎ. ಕೆ. ಆ್ಯಂಟನಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next