Advertisement

ಸರ್ಕಾರದಿಂದ ಬಾರದ ಸಾಲ ಮನ್ನಾ ಹಣ

05:53 PM Nov 16, 2020 | Suhan S |

ಕಲಬುರಗಿ: ಸ್ಥಳೀಯ ಸಂಸ್ಥೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ, ವಿಧಾನ ಪರಿಷತ್ತಿನನಾಲ್ವರು ಸದಸ್ಯರು ಆಯ್ಕೆಯ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಮುಗಿಯುತ್ತಿದ್ದಂತೆ ಸಹಕಾರಿ ಕ್ಷೇತ್ರದ ಚುನಾವಣೆ ಕಾವು ತೀವ್ರತೆ ಪಡೆದುಕೊಂಡಿದೆ.

Advertisement

ಇದೇ ನ.29ರಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ 13 ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆಚುನಾವಣೆ ನಿಗದಿಯಾಗಿದೆ. ಶಾಸಕರು ಹಾಗೂ ವಿವಿಧ ಮುಖಂಡರು ಬ್ಯಾಂಕ್‌ನ ಚುನಾವಣೆಗೆ ಸ್ಪರ್ಧಿಸುವುದರಿಂದ ಚುನಾವಣೆ ಜಿದ್ದಾ ಜಿದ್ದಿಯಾಗಿ ಮಾರ್ಪಟ್ಟಿದೆ.

ಚುನಾವಣೆ ಕಳೆದ ಮಾರ್ಚ್‌ ತಿಂಗಳಲ್ಲೇನಡೆಯಬೇಕಿತ್ತು. ಆದರೆ ಕೊರೊನಾದಿಂದ  ಮುಂದೂಡಲ್ಪಟ್ಟು ಈಗ ನಡೆಯುತ್ತಿದೆ. ಆದರೆ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಹಾಗೂಆಡಳಿತದ ಹಸ್ತಕ್ಷೇಪ ಉಂಟಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ವಿಎಸ್‌ ಎಸ್‌ಎನ್‌) ಸಂಘಗಳಿಂದ 10 ನಿರ್ದೇಶಕರು, ಟಿಎಪಿಸಿಎಂಗಳಿಂದ ಒಂದು, ಪಟ್ಟಣ ಸಹಕಾರಿ ಸಂಘಗಳಿಂದ ಹಾಗೂ ಇತರೆ ಸಹಕಾರಿ ಸಂಸ್ಥೆಗಳಿಂದ ಒಂದು ಸೇರಿ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಮತದಾನ ಹಕ್ಕಿನಿಂದ ವಂಚಿತ: ಡಿಸಿಸಿ ಬ್ಯಾಂಕ್‌ನಡಿ 321 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ವಿಎಸ್‌ ಎಸ್‌ಎನ್‌) ಸಂಘಗಳಿವೆ. ಆದರೆ 124 ಸಂಘಗಳು ಮಾತ್ರ ಮತದಾನಕ್ಕೆ ಅರ್ಹತೆ ಪಡೆದುಕೊಂಡಿವೆ. ಒಟ್ಟಾರೆ ಸಾಲದ ವಿತರಣೆಯಲ್ಲಿ ಶೇ. 50ರಷ್ಟು ವಸೂಲಾತಿಯಾಗಿಲ್ಲವೆಂದು ಹಾಗೂ ಸಾಮಾನ್ಯ ಸಭೆಗೆ ಹಾಜರಾಗಿಲ್ಲ ಎಂಬಿತ್ಯಾದಿ ಕಾರಣಗಳ ಹಿನ್ನೆಲೆಯಲ್ಲಿ ಮತದಾನ ಹಕ್ಕಿನಿಂದ ದೂರ ಇಡಲಾಗಿದೆ.

Advertisement

ಬೆಳೆಸಾಲದ ಮನ್ನಾ ಹಣ ಸರ್ಕಾರ ಬಿಡುಗಡೆ ಮಾಡಬೇಕು. ಆದರೆ ಅದನ್ನು ಬಾಕಿ ಎಂಬುದಾಗಿಪರಿಗಣಿಸಿ ಸಂಘಗಳು ಮತದಾನದ ಹಕ್ಕಿನಿಂದ ವಂಚಿತವಾಗಿವೆ. ಒಂದು ವೇಳೆ ಸರ್ಕಾರ ಸಾಲ ಮನ್ನಾದ ಹಣ ನವೆಂಬರ್‌ ಮೊದಲ ವಾರದೊಳಗೆ ಬಿಡುಗಡೆ ಮಾಡಿದ್ದರೆ ಬಹುತೇಕ ಎಲ್ಲ ಸಂಘಗಳು ಮತದಾನಕ್ಕೆ ಅರ್ಹತೆ ಪಡೆದು ಮತದಾರರ ಪಟ್ಟಿಯಲ್ಲಿ ಹೆಸರುಪಡೆಯುತ್ತಿದ್ದವು. ಆದರೆ ಸರ್ಕಾರದಿಂದ ಬಾರದ ಸಾಲ ಮನ್ನಾದ ಹಣದಿಂದ ಸಂಘಗಳು ಶೋಷಣೆಗೆ ಒಳಗಾಗುವಂತಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 10 ಟಿಎಪಿಸಿಎಂಗಳಿವೆ. ಆದರೆ ಇವುಗಳಲ್ಲೂ ಕೇವಲ ಮೂರು ಸಂಸ್ಥೆಗಳು ಮತದಾನ ಅರ್ಹತೆ ಹೊಂದಿವೆ. ಅದೇ ರೀತಿ ಪಟ್ಟಣ ಸಹಕಾರಿ ಸಂಸ್ಥೆಗಳನ್ನು ಯಾವುದಾದರೂ ಕಾರಣ ಮುಂದೆ ಮಾಡಿಕೊಂಡು ಮತದಾನದಿಂದ ಹೊರಗಿಡಲಾಗುತ್ತಿದೆ.

ನ್ಯಾಯಾಲಯಕ್ಕೆ ಮತದಾನದ ಹಕ್ಕು: ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿರುವ 321 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ವಿಎಸ್‌ಎಸ್‌ಎನ್‌) ಸಂಘಗಳ ಪೈಕಿ ಕೇವಲ 124ಸಂಘಗಳು ಮಾತ್ರ ಮತದಾನ ಹಕ್ಕು ಪಡೆದು  ಉಳಿದ ಸಂಸ್ಥೆಗಳೆಲ್ಲ ಮತದಾರ ಪಟ್ಟಿಯಿಂದ ಹೊರಗಿದ್ದುದರಿಂದ ಉಳಿದ ಸಂಸ್ಥೆಗಳಲ್ಲೀಗ 100 ಸಮೀಪ ಸಂಘಗಳು ನ್ಯಾಯಾಲಯದ ಮೊರೆ ಹೋಗಿ ಮತದಾನದ ಹಕ್ಕನ್ನು ಪಡೆದಿದ್ದಾರೆ. ಈಗ 224ಕ್ಕೆ ಮತದಾರರ ಸಂಖ್ಯೆಗೇರಿದೆ. ಇನ್ನಷ್ಟು ಸಂಘಗಳು ನ್ಯಾಯಾಲಯದಿಂದ ಮತದಾನ ಹಕ್ಕು ಪಡೆಯುವ ಸಾಧ್ಯತೆಗಳಿವೆ.

ಹಳಬರು ಬಾರದಂತೆ ಕಾರ್ಯತಂತ್ರ :  ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಆಡಳಿತದ ಕಾರ್ಯಭಾರವನ್ನು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಮುನ್ನಡೆಸಿಕೊಂಡು ಬಂದಿದ್ದು, ಆದರೆ ಈಗ ರಾಜ್ಯ ಸರ್ಕಾರದ ಆಡಳಿತಾರೂಢ ಬಿಜೆಪಿ ಈ ಸಲ ಹೇಗಾದರೂ ಮಾಡಿ ಬ್ಯಾಂಕ್‌ ಆಡಳಿತ ತನ್ನ ಕೈಗೆ ತೆಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಹಲವು ತಂತ್ರಗಾರಿಗೆ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬ್ಯಾಂಕ್‌ನ ಪ್ರಸ್ತುತ ನಿರ್ದೇಶಕರಲ್ಲಿ ಅರ್ಧದಷ್ಟು ಮರಳಿ ಚುನಾಯಿತರಾಗಬಾರದು ಎನ್ನುವ ತಂತ್ರಗಾರಿಗೆ ರೂಪಿಸಿ, ಕೆಲವು ಸಂಘಗಳನ್ನು ಸಹಕಾರಿ ನಿಯಮಗಳನ್ನು ಉಲ್ಲಂ ಸಲಾಗಿದೆ ಎಂಬುದಾಗಿ ಪ್ರಸ್ತಾಪಿಸಿ ನೊಟೀಸ್‌ ನೀಡಿ ಮತದಾರಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಚಿಂಚೋಳಿ ತಾಲೂಕಿನಿಂದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನ ನಿಭಾಯಿಸುತ್ತಿರುವ ಗೌತಮ ವೈಜನಾಥ ಪಾಟೀಲ ಪ್ರತಿನಿಧಿಸುವ ಸಂಘವನ್ನು ಸುಪರಸೀಡ್‌ಗೊಳಿಸಿ ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಹೀಗೆ ಅನೇಕರನ್ನು ಮತದಾನದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಸಹಕಾರಿ ಕ್ಷೇತ್ರದ ಈ ಚುನಾವಣೆ ತೀವ್ರ ರಂಗು ಪಡೆಯುತ್ತಿದೆ.

 

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next