Advertisement
ರಾಜ್ಯ ಸರ್ಕಾರ ಸೇಡಂ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಈಗಾಗಲೇ 20 ದಿನಗಳು ಕಳೆದಿದ್ದು, ಈ ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಅಂದಾಜು 19 ಸಾವಿರ ರೈತರ ಪೈಕಿ ಇಲ್ಲಿಯವರೆಗೆ ಕೇವಲ ಸಾವಿರ ರೈತರಿಂದ ಮಾತ್ರ ಬೆಳೆ ಸಾಲ ಹಾಗೂ ವೈಯಕ್ತಿಕ ವಿವರದ ಅರ್ಜಿ ಸಲ್ಲಿಕೆಯಾಗಿವೆ.ಸೇಡಂ ಆಯ್ಕೆ ಏಕೆ?: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡುವ ಅಂಗವಾಗಿ ಸರ್ಕಾರ ರಾಜ್ಯದ ದೊಡ್ಡಬಳ್ಳಾಪುರ ಹಾಗೂ ಜಿಲ್ಲೆಯ ಸೇಡಂ ತಾಲೂಕುಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ. ಸೇಡಂ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೆಂದರೆ ಕಡಿಮೆ ಸಂಖ್ಯೆಯಲ್ಲಿ ರೈತರು ಸಾಲ ಪಡೆದಿರುವುದು. ಡಿಸಿಸಿ ಬ್ಯಾಂಕ್‌ನ ಸಹಕಾರಿ ಸಂಘಗಳಲ್ಲಂತೂ ಅತ್ಯಂತ ಕಡಿಮೆ ಎಂದರೆ ಜಿಲ್ಲೆಯ ತಾಲೂಕೊಂದರ ಹೋಬಳಿಯಲ್ಲಿ ಪಡೆಯಲಾದ ಸಾಲವನ್ನು ಇಡೀ ಸೇಡಂ ತಾಲೂಕಿನ ರೈತರು ಪಡೆದಿದ್ದಾರೆ. ಅದೇ ಸ್ಥಿತಿ ರಾಷ್ಟೀಕೃತ ಬ್ಯಾಂಕ್ ಗಳಲ್ಲೂ ಇದೆ.
ಅದೇ ರೀತಿ ಸೇಡಂ ತಾಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 19 ಸಾವಿರ ರೈತರು ಬೆಳೆ ಸಾಲ ಪಡೆದಿದ್ದಾರೆ. ಅಂದಾಜು 20 ಕೋಟಿ ರೂ. ಮನ್ನಾ ಆಗುವ ಸಾಧ್ಯತೆಗಳಿವೆ. ಒಟ್ಟಾರೆ ರಾಜ್ಯದಲ್ಲಿಯೇ ಕಡಿಮೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಎಲ್ಲ ಪ್ರಕ್ರಿಯೆ ಸರಳ ಹಾಗೂ ಬೇಗ ಮುಗಿಸುವಂತಾಗಲು ಸೇಡಂ ತಾಲೂಕನ್ನು ಆಯ್ಕೆ ಮಾಡಿಕೊಂಡಿದೆ. ನಾಡ ಕಚೇರಿಯಲ್ಲೂ ಅವಕಾಶ: 20 ದಿನಗಳಲ್ಲಿ ಕೇವಲ ನಾಲ್ಕು ಸಾವಿರ ರೈತರ ಹೆಸರುಗಳು ಮಾತ್ರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮನ್ನಾದ ಅರ್ಹತೆಯ ಅರ್ಜಿ ಸಲ್ಲಿಕೆಯಾಗಿವೆ. ಇನ್ನು 9 ದಿನಗಳ ಕಾಲ ಮಾತ್ರ ಉಳಿದಿದೆ. ಈ ಅವಧಿಯಲ್ಲಿ ಉಳಿದ ರೈತರ ಹೆಸರುಗಳೆಲ್ಲ ನೋಂದಣಿಯಾಗಲು ಅಸಾಧ್ಯ ಎನ್ನುವುದನ್ನು ಮನಗಂಡ ಜಿಲ್ಲಾಡಳಿತ ಈಗ ನಾಡಕಚೇರಿಯಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸರದಿ ಇರುವುದನ್ನು ಮನಗಂಡು ಈ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಬೇಗನೇ ಮನ್ನಾ ಹಣ ಪಡೆಯುವ ಅರ್ಹತಾ ರೈತರ ಪಟ್ಟಿ ಅಂತಿಮಗೊಳಿಸಲು ತಂತ್ರಾಂಶವೊಂದನ್ನು ರೂಪಿಸಲಾಗಿದೆ.
Related Articles
Advertisement
ತನಿಖೆ ಕಾರ್ಯ ಚುರುಕು: ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ವಿಎಸ್‌ಎಸ್‌ಎನ್) ಸಂಘಗಳಲ್ಲಿ ಬೆಳೆ ಸಾಲ ವಿತರಣೆಯಲ್ಲಿ ಅವ್ಯಹವಾರ, ಸಾಲ ಮನ್ನಾದಲ್ಲಿ ಲೋಪಕ್ಕೆ ಸಂಬಂಧಿಸಿದಂತೆ ಸಹಕಾರಿ ಕಾಯ್ದೆ 69ರ ಅಡಿ ತನಿಖೆ ಕಾರ್ಯ ಚುರುಕುಗೊಂಡಿದೆ. ಸಂಘದ ಕಾರ್ಯದರ್ಶಿಯವರು ಐದಾರು ವರ್ಷಗಳಿಂದ ರೈತರಿಗೆ ಸಾಲ ವಿತರಿಸದೇ ಇರುವುದು ಹಾಗೂ ಬೆಳೆ ಸಾಲ ಮನ್ನಾ ಹಣ ವಿತರಿಸದೇ ಇರುವುದು ಜತೆಗೆ ಅಮಾಯಕ ಹಾಗೂ ಮೃತ ರೈತರ ಹೆಸರಿನಲ್ಲಿ ಸಾಲ ಎತ್ತಿ ಹಾಕಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಆಶ್ಚರ್ಯಕರ ಸಂಗತಿ ಎಂದರೆ ಬಂಗಾರ ಅಡವು ಇಡದೇ ಸಾಲ ಎತ್ತಿ ಹಾಕಿರುವುದು ಈಗ ಸಾಲ ಮರು ಪಾವತಿ ಮಾಡಿರುವುದು ಪತ್ತೆಯಾಗಿದೆ. ತನಿಖೆಯನ್ನು ಜಿಲ್ಲಾಧಿಕಾರಿಗಳು ನಿಗಾ ವಹಿಸುತ್ತಿರುವುದನ್ನು ಅವಲೋಕಿಸಿದರೆ ತನಿಖೆ ಒಂದು ಹಂತ ತಲುಪಲಿದೆ ಎನ್ನಲಾಗುತ್ತಿದೆ.
ಸೇಡಂ ತಾಲೂಕಿನ ರೈತರು ಸದ್ಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಪಡೆಯುವುದಕ್ಕಾಗಿ ರೈತರು ತಮ್ಮಸ್ವಯಂ ಘೋಷಣೆಯನ್ನು ತಾಲೂಕಿನ ಯಾವುದೇ ನಾಡಕಚೇರಿಯಲ್ಲಿ ಸಲ್ಲಿಸಬಹುದು. ಪ್ರತಿ ದಿನ ಒಂದು ನಾಡಕಚೇರಿಯವರು 50 ಜನ ರೈತರ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದ್ದು, 50ಕ್ಕಿಂತ ಹೆಚ್ಚಿನ ಅರ್ಜಿಗಳಿಗೆ ಟೋಕನ್ ಕೊಡಲಾಗುವುದು. ಇದಲ್ಲದೇ ಪ್ರತಿ ಬ್ಯಾಂಕ್‌ನ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ