Advertisement

ಋಣ ಪರಿಹಾರ ಕಾಯ್ದೆ: ಸರ್ಕಾರಕ್ಕೆ ನೋಟಿಸ್‌

01:16 AM Aug 11, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಋಣ ಪರಿಹಾರ ಕಾಯ್ದೆ-2018’ನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತು ಕರ್ನಾಟಕ ರಾಜ್ಯ ಜ್ಯುವೆಲ್ಲರಿ ಫೆಡರೇಷನ್‌ (ಕೆಎಸ್ಜೆಎಫ್) ಪ್ರಧಾನ ಕಾರ್ಯದರ್ಶಿ ಡಾ. ಬಿ.ರಾಮಾಚಾರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್‌ ಆರಾಧೆ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಸಹಕಾರ ಇಲಾಖೆ ಹಾಗೂ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್‌ ಜಾರಿಗೊಳಿಸಿತು. ಅರ್ಜಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?: ಗಿರವಿ ವ್ಯಾಪಾರಿಗಳಿಗೆ ಹಾಗೂ ಲೇವಾದೇವಿದಾರರಿಗೆ ಸರ್ಕಾರದ ವತಿಯಿಂದಲೇ ಕಾನೂನು ಪ್ರಕಾರ ಪರವಾನಗಿ ನೀಡಿದೆ. ಅವರಿಂದ ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ವಹಿವಾಟು ನಡೆಸಲು ಹಲವು ನಿಯಮಗಳನ್ನು ರೂಪಿಸಿರುವ ಸರ್ಕಾರ, ವ್ಯವಸ್ಥಿತವಾಗಿ ಕಾನೂನು ಚೌಕಟ್ಟಿನಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿದೆ. ಹೀಗಿರುವಾಗ ಋಣ ಪರಿಹಾರ ಕಾಯ್ದೆ ಜಾರಿಗೆ ತರುವ ಮೂಲಕ ಗಿರವಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ರೈತರು ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಮಾಡಿದ್ದ ಸರ್ಕಾರ, ಬ್ಯಾಂಕ್‌ಗಳಿಗೆ ತನ್ನ ಬೊಕ್ಕಸದಿಂದ ಹಣ ಮರು ಪಾವತಿಸಿದೆ. ಆದರೆ, ಗಿರವಿ ವ್ಯಾಪಾರಿಗಳಿಂದ, ಲೇವಾದೇವಿದಾರರಿಂದ ಪಡೆದ ಹಣ ಮನ್ನಾ ಮಾಡಿರುವ ಸರ್ಕಾರ ನಮಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಇದರಿಂದ ಕಾನೂನು ಪ್ರಕಾರ ಪರವಾನಗಿ ಪಡೆದು ಗಿರವಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಕರ್ನಾಟಕ ಋಣ ಪರಿಹಾರ ಕಾಯ್ದೆ’ಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next