Advertisement

ರೈತರಿಗೆ ಏಕಕಾಲದಲ್ಲಿ ಋಣಮುಕ್ತ ಪತ್ರ

06:45 AM Aug 14, 2018 | Team Udayavani |

ಬೆಂಗಳೂರು: ಸಾಲಮನ್ನಾ ಕುರಿತು ರೈತರಿಗೆ ಏಕಕಾಲದಲ್ಲಿ ಋಣಮುಕ್ತ ಪತ್ರ ವಿತರಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮುಂದಿನ ಜುಲೈ ಒಳಗೆ ಉಳಿಕೆ ಸಾಲ ಮರುಪಾವತಿ ಆಧಾರದಲ್ಲಿ ಆಗಲಿದೆಯಾದರೂ ಒಂದು ಲಕ್ಷ ರೂ. ಚಾಲ್ತಿ ಸಾಲ ಮನ್ನಾ ಕುರಿತು ಋಣಮುಕ್ತ  ಪತ್ರ ನೀಡಲಾಗುವುದು. ದಿನಾಂಕ ಹಾಗೂ ಸ್ಥಳ ಮುಖ್ಯಮಂತ್ರಿಯವರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಸಾಲಮನ್ನಾ ಕುರಿತು ಯಾವುದೇ ಗೊಂದಲ ಅಗತ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು 50 ಸಾವಿರ ರೂ.ವರೆಗೆ ಮನ್ನಾದ ಲಾಭ ಪಡೆದಿರುವ ರೈತರು ಸಾಲ ನವೀಕರಣ ಮಾಡಿಕೊಂಡಿದ್ದರೆ ಈಗ ಕುಮಾರಸ್ವಾಮಿಯವರು ಘೋಷಿಸಿರುವ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲದ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು 8165 ಕೋಟಿ ರೂ. ಹಾಗೂ  ಎಚ್‌.ಡಿ.ಕುಮಾರಸ್ವಾಮಿ ಅವರು 9448 ಕೋಟಿ ರೂ. ಸಾಲ ಮನ್ನಾ ಘೋಷಿಸಿದ್ದು ಒಟ್ಟು 17613 ಕೋಟಿ ರೂ. ಮನ್ನಾ ಆಗಲಿದೆ. ಸಹಕಾರ ಸಂಘಗಗಳ 22 ಲಕ್ಷ ರೈತರಲ್ಲಿ 20 ಲಕ್ಷ ರೈತರು ಇದರ ಸಂಪೂರ್ಣ ಲಾಭ ಪಡೆಯಲಿದ್ದಾರೆ.

ರಾಜ್ಯದ ಸಹಕಾರ ಸಂಘಗಳಲ್ಲಿ  ಒಟ್ಟು ಸಾಲ ಇರುವುದೇ 10700 ಕೋಟಿ ರೂ. ಆ ಪೈಕಿ 1 ಲಕ್ಷ ರೂ.ವರೆಗಿನ 9448 ಕೋಟಿ ರೂ. ಮನ್ನಾ  ಆಗಲಿದೆ.ಸಾಲಮನ್ನಾ ಎಲ್ಲ ಜಿಲ್ಲೆಗಳ ರೈತರಿಗೂ ಅನುಕೂಲವಾಗಲಿದೆ. ಅದರಲ್ಲಿ ಉತ್ತರ ಕರ್ನಾಟಕದ ರೈತರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಸಿದರು.

Advertisement

ಅಪೆಕ್ಸ್‌ ಬ್ಯಾಂಕ್‌ ಹಾಗೂ ಡಿಸಿಸಿ ಬ್ಯಾಂಕ್‌ಗಳಿಗೆ ಸಾಲಮನ್ನಾ ಬಾಬ್ತು ಹಣ ಜಮೆ ಮಾಡುವ ವಿಚಾರದಲ್ಲೂ ಯಾವುದೇ ಗೊಂದಲ ಇಲ್ಲ. ಸಾಲಮನ್ನಾ ಕುರಿತು ಡಿಸಿಸಿ ಬ್ಯಾಂಕುಗಳಿಂದ ಮಾಹಿತಿ ಬರುತ್ತಿದ್ದಂತೆ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಪ್ರಸ್ತುತ 1400 ಕೋಟಿ ರೂ. ಮಾತ್ರ ಬಾಕಿ ನೀಡಬೇಕಿದೆ.ಅಪೆಕ್ಸ್‌ ಬ್ಯಾಂಕ್‌ಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಟ್ಟಿರುವ ದೀರ್ಘಾವಧಿ ಠೇವಣಿ ವರ್ಗಾವಣೆ ಮಾಡಲು ಚರ್ಚೆ ನಡೆಯುತ್ತಿದೆ. ಈಗಾಗಲೇ ಎಪಿಎಂಸಿಯ 520 ಕೋಟಿ ರೂ. ವರ್ಗಾವಣೆಗೆ ಸೂಚಿಸಲಾಗಿದೆ ಎಂದರು.

ನಬಾರ್ಡ್‌ ವತಿಯಿಂದ ರೈತರಿಗೆ ಸಾಲ ವಿತರಣೆ ಸಂಬಂಧ ರೀ ಫೈನಾನ್ಸಿಂಗ್‌ ಶೇ.40 ಕ್ಕೆ ಇಳಿಸಲಾಗಿದೆ. ಅದನ್ನು ಶೇ.75 ರಷ್ಟು ಹೆಚ್ಚಿಸಲು ಈಗಾಗಲೇ ಮುಖ್ಯಮಂತ್ರಿಯವರು ಕೇಂದ್ರ ಸಚಿವರಿಗೆ ನಿಯೋಗದಲ್ಲಿ ಮನವಿ ಮಾಡಿದ್ದಾರೆ. ಆದರೆ, ಶೇ.60 ರಷ್ಟು ಮಂಜೂರಾತಿಗೆ ಒಪ್ಪಿಗೆ ದೊರೆತಿದೆ. ಅಷ್ಟು ಪ್ರಮಾಣ ಸಿಕ್ಕರೂ ಮುಂದಿನ ಒಂದು ವರ್ಷದಲ್ಲಿ ಇನ್ನು 10 ರಿಂದ 15 ಲಕ್ಷ ಹೊಸ ರೈತರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಸಾಲಮನ್ನಾ ಕುರಿತು ರೈತರಿಗೂ ಸ್ಪಷ್ಟತೆ ಗೊತ್ತಾಗಲು ಪ್ರತಿ ಸಹಕಾರ ಸಂಘದಲ್ಲೂ ಎಷ್ಟು ರೈತರು ಎಷ್ಟೆಷ್ಟು ಸಾಲ ಪಡೆದಿದ್ದಾರೆ. ಎಷ್ಟು ಮನ್ನಾ ಆಗಿದೆ. ಉಳಿದದ್ದು ಎಷ್ಟು ಪಾವತಿಸಬೇಕು ಎಂಬ ಪಟ್ಟಿ ಮಾಹಿತಿ ಫ‌ಲಕದ ಮೇಲೆ ಅಂಟಿಸಲು ಸೂಚಿಸಲಾಗಿದೆ. ಅಕ್ರಮ ನಡೆದಿದ್ದರೂ ಇದರಿಂದ ಪತ್ತೆಯಾಗಲಿದೆ.

ರಾಜ್ಯದಲ್ಲಿ 78 ಲಕ್ಷ ರೈತ ಕುಟುಂಬಗಳಿದ್ದು 22 ಲಕ್ಷ ರೈತರು ಸಹಕಾರಿ ಸಂಘ, 28 ಲಕ್ಷ ರೈತರು ‌ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಇನ್ನೂ 50 ಲಕ್ಷದಷ್ಟು ರೈತರಿಗೆ ಸಾಲದ ವ್ಯವಸ್ಥೆ ಆಗುತ್ತಿಲ್ಲ. ಅವರೆಲ್ಲಾ ಖಾಸಗಿಯವರ ಬಳಿ ಸಾಲ ಪಡೆಯುವಂತಾಗಿದೆ. ಇದನ್ನು ತಪ್ಪಿಸಲು ಸಾಧ್ಯವಾದಷ್ಟೂ ರೈತರನ್ನು ಸಹಕಾರ ಸಂಘಗಗಳ ಸದಸ್ಯರನ್ನಾಗಿ ಮಾಡಿ ಸಾಲ ನೀಡುವ ಗುರಿ ಹೊಂದಾಗಿದೆ ಎಂದು ಹೇಳಿದರು. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಕುರಿತು ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಲಿದ್ದು ರೈತರಿಗೆ ಸಿಹಿ ಸುದ್ದಿ ದೊರೆಯಲಿದೆ ಎಂದು ತಿಳಿಸಿದರು.

ಕಿರುಸಾಲ ವ್ಯವಸ್ಥೆಯಡಿ ರೈತರಿಗೆ ಬಡ್ಡಿ ಹೊರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ,  ಕಿರುಸಾಲ ನೀಡುವ ಸಂಸ್ಥೆಗಳ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಷ್ಟು ಸಾಲ ನೀಡಲಾಗಿದೆ,  ಎಷ್ಟು ಬಡ್ಡಿ ದರ ವಿಧಿಸಲಾಗುತ್ತಿದೆ. ಅವರ ವಹಿವಾಟು ಎಷ್ಟು ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಆರು ಸಾವಿರ ನಕಲಿ ಖಾತೆ
ಸಹಕಾರ ಸಂಘಗಳಲ್ಲೂ ನಕಲಿ ಖಾತೆಗಳಿದ್ದು ಮೃತಪಟ್ಟವರ ಹೆಸರಿನಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿಗಳೇ ವರ್ಷ ವರ್ಷ ಸಾಲ ಪಡೆಯುವುದು ಹಾಗೂ ನವೀಕರಣ ಲೆಕ್ಕ ತೋರಿಸುತ್ತಿರುವುದು ಬಹಿರಂಗಗೊಂಡಿದೆ. ಖುದ್ದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌  ಈ ಕುರಿತು ಮಾಹಿತಿ ನೀಡಿದ್ದು ಆರು ಸಾವಿರ ನಕಲಿ ಖಾತೆ ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ. ಇದರಡಿ 50 ಕೋಟಿ ರೂ.ವರೆಗೆ ಸಾಲ ಪಡೆದಿದ್ದಾರೆ. ನಕಲಿ ಖಾತೆಗೆ ಕಡಿವಾಣ ಹಾಕಲು ಆಧಾರ್‌ ಲಿಂಕ್‌ ಮಾಡಿಸಲಾಗುತ್ತಿದೆ ಎಂದು ಹೇಳಿದರು. ಮಂಡ್ಯದಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬ ಮೃತಪಟ್ಟಿದ್ದ ವ್ಯಕ್ತಿಯ ಹೆಸರಿನಲ್ಲಿ 2.50 ಲಕ್ಷ ರೂ. ಸಾಲ ಪಡೆದು ನವೀಕರಣ ಮಾಡಿಕೊಳ್ಳುತ್ತಿರುವುದು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next