ಕಲಬುರಗಿ: ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನಷ್ಟು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಿದೆ ಎಂದು ಸಹಕಾರ ಹಾಗೂ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.
ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಶನಿವಾರ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಋಣ ಮುಕ್ತ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬರೀ ಸಾಲ ಮನ್ನಾ ಮಾಡುವುದೊಂದೇ ಪ್ರಸ್ತುತ ಸರ್ಕಾರದ ಕಾರ್ಯಕ್ರಮ ಎಂದು ತಿಳಿಯಬಾರದು. ಮುಂದಿನ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿರುವ ಯೋಜನೆಗಳಿಗೂ ಸಹಾಯಕವಾಗಲೆಂದು ಆಧಾರ್, ರೇಷನ್ ಕಾರ್ಡ್ ಸೇರಿದಂತೆ ಇತರೆ ದಾಖಲೆ ಪಡೆಯಲಾಗುತ್ತಿದೆ ಎಂದರು.
ಸಹಕಾರಿ ಸಂಘಗಳ ಕಾರ್ಯದರ್ಶಿಗಳು ನಡೆಸುವ ಅವ್ಯವಹಾರ ತಡೆಗಟ್ಟಲು ಸಾಲ ಮನ್ನಾಕ್ಕೆ ದಾಖಲೆ ಪತ್ರ ಪಡೆಯಲಾಗುತ್ತಿದೆ. ಇದಕ್ಕಾಗಿ ರೈತರು ಸಹಕರಿಸಬೇಕು. ಹಲವೆಡೆ ರೈತರ ಹೆಸರಿನ ಮೇಲೆ ಕಾರ್ಯದರ್ಶಿಗಳೇ ಸಾಲ ಎತ್ತಿ ಅವರೇ ಪಡೆದು, ತದ ನಂತರ ಸಾಲ ಮನ್ನಾ ಹಣವನ್ನು ಅವರೇ ಪಡೆದಿದ್ದಾರೆಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾಲ ಮನ್ನಾ ಹಣ ಹಾಗೂ ಬೆಳೆ ಸಾಲ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಲ್ಲ ರೈತರಿಗೂ ಋಣಪತ್ರ: ಸಹಕಾರಿ ಸಂಘಗಳಲ್ಲಿ ಲಕ್ಷ ರೂ.ವರೆಗಿನ ಒಟ್ಟಾರೆ 9448 ಕೋಟಿ ರೂ. ಸಾಲ ಮನ್ನಾ ಮಾಡಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಯಾವ ರೈತರು ಯಾವ ತಿಂಗಳಲ್ಲಿ ಸಾಲ ಪಡೆದಿದ್ದಾರೆಯೋ ಅದೇ ತಿಂಗಳು ಅವರ ಸಾಲ ಮನ್ನಾ ಹಣ ಜಮಾ ಮಾಡಿ ಋಣ ಪತ್ರ ನೀಡಲು ಕಾರ್ಯಸೂಚಿ ರೂಪಿಸಲಾಗಿದೆ. ಬರುವ 2019ರ ಜೂನ್ ಅಂತ್ಯದೊಳಗೆ ಎಲ್ಲ ರೈತರಿಗೆ ಋಣಪತ್ರ ನೀಡಿ ಸಾಲದಿಂದ ಮುಕ್ತಿಗೊಳಿಸಲಾಗುವುದು. ಕಳೆದ ಜುಲೈದಿಂದ ನವೆಂಬರ್ ತಿಂಗಳವರೆಗಿನ 800 ಕೋಟಿ ರೂ. ಸಾಲ ಮನ್ನಾ ಹಣ ಸಹಕಾರಿ ಸಂಘಗಳಿಗೆ ಈಗಷ್ಟೇ ಬಿಡುಗಡೆ ಮಾಡಲಾಗಿದೆ. ಹಂತ-ಹಂತವಾಗಿ ಹಣ ಬಿಡುಗಡೆಯಾಗುವುದು. ರೈತರು ಎಳ್ಳು ಕಾಳಷ್ಟು ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರೈತರು ಆಶಾವಾದಿಯಾಗಿದ್ದು, ನಿಸ್ವಾರ್ಥದಿಂದ ದುಡಿಯುವ ಶ್ರಮ ಜೀವಿಯಾಗಿದ್ದಾರೆ. ರೈತರಿಗೆ ಯಾವುದೇ ಪಕ್ಷ ಹಾಗೂ ಜಾತಿ ಎಂಬುದಿಲ್ಲ ಎಂದರು. ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷತೆ ವಹಿಸಿ, ಸೇಡಂ ಕ್ಷೇತ್ರದಲ್ಲಿ ಅತಿ ಕಡಿಮೆ ಬೆಳೆ ಸಾಲ ಸಿಕ್ಕಿದ್ದರಿಂದ ಮುಂದಿನ ದಿನಗಳಲ್ಲಿ ನ್ಯಾಯ ಕಲ್ಪಿಸಬೇಕೆಂದು ಕೋರಿದರು.
ಸೇಡಂ ಮತಕ್ಷೇತ್ರದ ಕುರಕುಂಟಾ ರೈತ ತಿಪ್ಪಣ್ಣಪ್ಪ ಋಣಮುಕ್ತ ಪ್ರಮಾಣ ಪತ್ರ ಪಡೆದ ರಾಜ್ಯದ ಪ್ರಥಮ ರೈತ ಎಂಬ ಹೆಗ್ಗಳಿಕೆ ಪಾತ್ರರಾದರು. ಸಹಕಾರಿ ಸಂಘಗಳಲ್ಲಿ ಸಾಲ ಹೊಂದಿದ್ದ 24 ರೈತರಿಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಹೊಂದಿದ್ದ 351 ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಲಾಯಿತು. ಡಿಸಿ ವೆಂಕಟೇಶಕುಮಾರ ಇದ್ದರು.
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭಿಸಲಾಗುವುದು. ಮಾರುಕಟ್ಟೆಯಲ್ಲಿ ಈಗ ಬೆಲೆ ಕಡಿಮೆ ಇರುವುದರಿಂದ ಮಾರಾಟ ಮಾಡಿ ನಷ್ಟಕ್ಕೆ ಒಳಗಾಗಬಾರದು. ಈಗಾಗಲೇ ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಕೇಂದ್ರದಿಂದ ಅನುಮತಿ ಬಂದ ನಂತರ ಆರಂಭಿಸಲಾಗುವುದು.
ಬಂಡೆಪ್ಪ ಖಾಶೆಂಪೂರ,
ಸಹಕಾರ ಸಚಿವ