Advertisement

ಸಹಕಾರ ಸಂಸ್ಥೆಗಳ ಮೇಲೆ ಸಾಲಮನ್ನಾ ಕಾರ್ಮೋಡ

06:15 AM Jun 08, 2018 | Team Udayavani |

ಕೋಲಾರ: ರಾಜ್ಯ ಸರಕಾರದ ಸಾಲಮನ್ನಾ ಪ್ರಸ್ತಾಪ ಸಹಕಾರ ಸಂಸ್ಥೆಗಳನ್ನು ಮುಳುಗುವ ಸುಳಿಗೆ ಸಿಲುಕುವಂತೆ ಮಾಡಿದೆ. ಕೋಲಾರ ಸೇರಿ ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳು ಹಾಗೂ ಡಿಸಿಸಿ ಬ್ಯಾಂಕ್‌ಗಳಡಿಯಲ್ಲಿ ಸಾಲದ ವ್ಯವಹಾರ ನಡೆಸುತ್ತಿರುವ ಸಹಕಾರ ಸಂಸ್ಥೆಗಳಲ್ಲಿ ಸಾಲ ವಸೂಲಾತಿ ಪ್ರಮಾಣ ಸಂಪೂರ್ಣ ಸ್ಥಗಿತಗೊಂಡಿರುವುದು ಈ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.

Advertisement

ಚುನಾವಣೆ ಘೋಷಣೆಯಾದ ನಂತರ ಜೆಡಿಎಸ್‌ ಸೇರಿ ಬಹುತೇಕ ರಾಜಕೀಯ ಪಕ್ಷಗಳು ಸಾಲಮನ್ನಾ ವಿಚಾರವನ್ನು ತಮ್ಮ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಸಹಕಾರ ಸಂಸ್ಥೆಗಳ ಪಾಲಿಗೆ ನುಂಗಲಾರದ ತುಪ್ಪವಾಗಿದೆ. ಚುನಾವಣೆ ಘೋಷಣೆಯಾಗುವವರೆಗೂ, ಅಂದರೆ ಮಾರ್ಚ್‌ ಅಂತ್ಯದವರೆಗೂ ಸುಗಮವಾಗಿಯೇ ಸಾಗಿದ್ದ ಸಹಕಾರ ಬ್ಯಾಂಕುಗಳ ಸಾಲದ ವ್ಯವಹಾರ, ಚುನಾವಣಾ ಪ್ರಚಾರದ ಕಾವು ಹೆಚ್ಚುತ್ತಿದ್ದಂತೆಯೇ ದಿಕ್ಕು ತಪ್ಪುವಂತಾಯಿತು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಮಾಡಿ, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇದೇ ವಿಚಾರವನ್ನು ದೃಢೀಕರಿಸಿದ್ದರು. ಇದೀಗ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ರೈತರು, ಸ್ತ್ರೀಶಕ್ತಿ ಸಂಘಗಳಲ್ಲಿ ಸಾಲಮನ್ನಾ ಖಚಿತ ಎನ್ನುವ ಭಾವನೆ ಹುಟ್ಟಿಸಿದೆ.

ಸಾಲಮನ್ನಾ ವಿಚಾರವನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿಯವರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿಯೇ ಬಿಜೆಪಿ ಸಭಾತ್ಯಾಗ ಮಾಡಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ನಂತರ ಕುಮಾರಸ್ವಾಮಿಯವರು ಸಾಲಮನ್ನಾ ಹೇಳಿಕೆಗೆ ತಾವು ಈಗಲೂ ಬದ್ಧ ಎನ್ನುವ ಹೇಳಿಕೆ ನೀಡಿದ್ದು, ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದಿರುವ ರೈತಾಪಿ ಹಾಗೂ ಸ್ತ್ರೀಶಕ್ತಿ ಸಂಘಗಳ ಮಹಿಳಾ ಮಣಿಗಳಲ್ಲಿ ಸಾಲಮನ್ನಾ ಆಸೆ ಚಿಗುರುವಂತಾಯಿತು.

ಕಳೆದ ವಾರ ಸಾಲಮನ್ನಾ ವಿಚಾರವನ್ನೇ ಅಜೆಂಡವಾಗಿಸಿಕೊಂಡು ಮುಖ್ಯಮಂತ್ರಿಯವರು ರೈತ ಮುಖಂಡರ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಸೇರಿ ರಾಜ್ಯದ ಬಹುತೇಕ ಸಹಕಾರ ಸಂಸ್ಥೆಗಳ ಸಾಲ ವಸೂಲಾತಿ ನಿಂತೇ ಹೋಗಿದೆ. ಸುಗಮವಾಗಿ ನಡೆಯುತ್ತಿದ್ದ ಸಾಲ ವಸೂಲಾತಿ ಪ್ರಕ್ರಿಯೆ, ಚುನಾವಣಾ ಭರವಸೆಗಳ ನಂತರ ದಿಢೀರ್‌ ಸ್ಥಗಿತಗೊಂಡಿರುವುದರಿಂದ ಸಹಕಾರ ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಗೆ ದಿಕ್ಕು ತೋಚದಂತಾಗಿದೆ. ಸ್ವಯಂ ಪ್ರೇರಿತವಾಗಿ ಬ್ಯಾಂಕುಗಳಿಗೆ ಬಂದು ಆಯಾ ತಿಂಗಳ ಸಾಲದ ಕಂತನ್ನು ಪಾವತಿಸುತ್ತಿದ್ದ ರೈತರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಇದೀಗ ಎರಡು ತಿಂಗಳುಗಳಿಂದ ಬ್ಯಾಂಕುಗಳತ್ತ ತಿರುಗಿಯೂ ನೋಡುತ್ತಿಲ್ಲ. ಸಾಲಮನ್ನಾ ವಿಚಾರದಲ್ಲಿ ಸರಕಾರದ ಘೋಷಣೆ ಶೀಘ್ರ ಪ್ರಕಟವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಸಾಲ ಪಡೆದವರು ಸಾಲದ ಕಂತು ಪಾವತಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಸುಮಾರು 300 ಕೋಟಿ ರೂ. ಬೆಳೆ ಸಾಲ ಹಾಗೂ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ಸಾಲವನ್ನು ನೀಡಲಾಗಿದೆ. ಅಧೋಗತಿಗೆ ಇಳಿದಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ, ಕೇಳಿದವರಿಗೆ ಸಾಲ ಮಂಜೂರು ಮಾಡಿ ಶೇ.100ರ ಪ್ರಮಾಣದಲ್ಲಿ ವಸೂಲಾತಿಯನ್ನು ಮಾಡುತ್ತಿದ್ದ ಆಡಳಿತ ಮಂಡಳಿ, ಈಗ ಸಾಲಮನ್ನಾ ಹೇಳಿಕೆಗಳಿಂದ ಆತಂಕಕ್ಕೊಳಗಾಗಿದೆ. ಏಪ್ರಿಲ್‌ ಮತ್ತು ಮೇನಲ್ಲಿ ಸಾಲ ವಸೂಲಾತಿ ಪ್ರಮಾಣ ಶೇ.25ಕ್ಕಿಂತಲೂ ಕಡಿಮೆ ಕುಸಿದಿದೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ಅಂಕಿ ಅಂಶ ಸಮೇತ ವಿವರಿಸುತ್ತಿದ್ದಾರೆ.

Advertisement

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ತ್ರೀಶಕ್ತಿ ಸಂಘಗಳಿಗೆ ಘೋಷಿಸಿದ್ದ ಶೂನ್ಯ ಬಡ್ಡಿ ಸಾಲವನ್ನು ಕೋಲಾರ ಡಿಸಿಸಿ ಬ್ಯಾಂಕ್‌ ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಪ್ರಮಾಣದ ಸಾಲ ನೀಡಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ತಾಲೂಕಿನ ನೂರಾರು ಸ್ತ್ರೀಶಕ್ತಿ ಸಂಘಗಳು ಈ ಸಾಲದ ಸದ್ಬಳಕೆ ಮಾಡಿಕೊಂಡು, ಶೇ.100ರಷ್ಟು ಪ್ರಮಾಣದಲ್ಲಿ ಸಾಲ ಮರುಪಾವತಿಯನ್ನು ಮಾಡುತ್ತಿದ್ದವು. ಆದರೆ, ಸಾಲಮನ್ನಾದ ಹೇಳಿಕೆಗಳಿಂದ ಮಹಿಳೆಯರು ಸಾಲ ಕಟ್ಟುವುದನ್ನೇ ನಿಲ್ಲಿಸಿದ್ದಾರೆ.

ಹಿಂದಿನ ಸರಕಾರ ಘೋಷಿಸಿದ್ದ 50 ಸಾವಿರ ರೂ.ವರೆಗಿನ ಸಾಲಮನ್ನಾ ಯೋಜನೆಯಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ ರೈತರಿಗೆ ಸುಮಾರು 110 ಕೋಟಿ ರೂ.ಗಳ ಲಾಭ ಸಿಗುವಂತಾಗಿತ್ತು. ನಂತರ ಜಿಲ್ಲೆಯ ರೈತರಿಗೆ ಸುಮಾರು 300 ಕೋಟಿ ರೂ.ಗಳ ಬೆಳೆ ಸಾಲವನ್ನು ನೀಡಲಾಗಿದೆ. ಈಗ ಬೆಳೆ ಸಾಲದ ಸಾಲ ವಸೂಲಾತಿ ಪ್ರಮಾಣವು ಸಂಪೂರ್ಣ ಸ್ಥಗಿತಗೊಂಡಿದೆ. ಸಾಲ ವಸೂಲಾತಿಗಾಗಿ ಹೋಗುತ್ತಿರುವ ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ, ಸರಕಾರದ ನಿರ್ಧಾರವನ್ನು ನೋಡಿಕೊಂಡು ಸಾಲ ಮರುಪಾವತಿಸುವುದಾಗಿ ಹೇಳಿ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳು ಬರಿಗೈಲಿ ವಾಪಸ್‌ ಕಳುಹಿಸುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶೀಘ್ರವಾಗಿ ರೈತರ ಬೆಳೆ ಸಾಲಮನ್ನಾ ಹಾಗೂ 1,116 ಕೋಟಿ ರೂ.ಗಳಷ್ಟಿರುವ ಸ್ತ್ರೀಶಕ್ತಿ ಸಂಘಗಳ ಶೂನ್ಯ ಬಡ್ಡಿ ಸಾಲವನ್ನು ಮನ್ನಾ ಮಾಡುವ ವಿಚಾರದಲ್ಲಿ ಖಚಿತ ನಿರ್ಧಾರವನ್ನು ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸಿದರೆ ರಾಜ್ಯದ ಸಹಕಾರ ಸಂಸೆœಗಳು ಅವನತಿಯ ಹಾದಿ ಹಿಡಿಯುವುದರಲ್ಲಿ ಸಂಶಯವಿಲ್ಲ.

ಸಿಎಂಗೆ ಮನವಿ
ಸಾಲಮನ್ನಾ ಹೇಳಿಕೆಗಳಿಂದ ಅಧೋಗತಿಯತ್ತ ಮುಖ ಮಾಡಿರುವ ಸಹಕಾರ ಸಂಸ್ಥೆಗಳನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡಲು ಸಾಲಮನ್ನಾ ವಿಚಾರದಲ್ಲಿ ಸರಕಾರ ವಿಳಂಬ ಮಾಡದೆ ಆದಷ್ಟು ಬೇಗ ನಿರ್ಧಾರ ಪ್ರಕಟಿಸುವಂತೆ ಕೋಲಾರ ಡಿಸಿಸಿ ಬ್ಯಾಂಕ್‌ ನಿರ್ದೇಶಕಿಯೂ ಆಗಿರುವ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಖುದ್ದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ವಾಸ್ತವಿಕ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದಾರೆ.

ಸರಕಾರ ಸಾಲಮನ್ನಾ ಮಾಡುತ್ತದೆಂಬ ನಿರೀಕ್ಷೆಯಲ್ಲಿ ಸಾಲ ಪಡೆದವರು ಮರುಪಾವತಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಎರಡು ತಿಂಗಳಿನಿಂದ ಬ್ಯಾಂಕ್‌ಗೆ ಶೇ.25ರಷ್ಟು ವಸೂಲಾತಿಯೂ ನಡೆದಿಲ್ಲ. ಸರಕಾರ ಸಾಲಮನ್ನಾ ವಿಚಾರದಲ್ಲಿ ಬೇಗ ನಿರ್ಧಾರ ಪ್ರಕಟಿಸದಿದ್ದರೆ ಸಹಕಾರ ಬ್ಯಾಂಕುಗಳನ್ನು ಮುಚ್ಚಬೇಕಾಗುತ್ತದೆ.
– ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷ, ಕೋಲಾರ ಡಿಸಿಸಿ ಬ್ಯಾಂಕ್‌.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next