ಮಹಾನಗರ: ನಗರದ 2 ಪ್ರಮುಖ ಜಂಕ್ಷನ್‌ಗಳಾಗದ ಪಂಪ್‌ವೆಲ್-ಪಡೀಲನ್ನು ಸಂಪರ್ಕಿಸುವ ರಸ್ತೆಯ ಅಳಪೆಯ ಮೇಘನಗರ ಅಪಾಯಕಾರಿ ತಿರುವಿನಲ್ಲಿ ವರ್ಷಪೂರ್ತಿ ಹೊಂಡಗಳಿಂದ ಕೂಡಿದ್ದು, ದುರಸ್ತಿ ಮಾಡಿದರೂ ತಿಂಗಳೊಳಗೆ ಮತ್ತೆ ಅದೇ ಸ್ಥಿತಿಗೆ ಬರುತ್ತದೆ. ಹೀಗಾಗಿ ಈ ರಸ್ತೆಗೆ ಶಾಶ್ವತ ಪರಿಹಾರ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
Advertisement
ಇದು ವಾಹನ ನಿಭಿಡ ರಸ್ತೆಯಾಗಿದ್ದು, ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿರುವುದರಿಂದ ಅಪಘಾತದ ಸ್ಥಿತಿ ಇದೆ. ರಸ್ತೆಯಲ್ಲಿ ಸಣ್ಣ ವಾಹನಗಳು ಸೇರಿದಂತೆ ಘನವಾಹನಗಳು ಕೂಡ ತೆರಳುತ್ತವೆ. ಹೀಗಾಗಿ ಸಣ್ಣ ವಾಹನದವರು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಇದೆ ಎಂಬುದು ವಾಹನ ಚಾಲಕರ ಆರೋಪವಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿಬಂದ ಬಹುತೇಕ ವಾಹನಗಳು ಮಂಗಳೂರು ನಗರವನ್ನು ಸಂಪರ್ಕಿಸ ಬೇಕಾದರೆ ಇದೇ ರಸ್ತೆಯ ಮೂಲಕ ಆಗಮಿಸುತ್ತವೆ. ಧರ್ಮಸ್ಥಳ, ಪುತ್ತೂರು, ವಿಟ್ಲ, ಸುಬ್ರಹ್ಮಣ್ಯ, ಮಡಿಕೇರಿ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಪ್ರದೇಶಗಳಿಗೆ ಸಾಗುವ ಬಸ್ಸುಗಳು ಸಹಿತ ಕೆಲವೊಂದು ಸಿಟಿ ಬಸ್ಸುಗಳು ಕೂಡ ಇದೇ ರಸ್ತೆಯಲ್ಲಿ ಸಾಗುತ್ತವೆ. ಹೀಗಾಗಿ ಪಂಪುವೆಲ್-ಪಡೀಲ್ ಮಧ್ಯೆ ವಾಹನದೊತ್ತಡ ಅಧಿಕವಿರುತ್ತದೆ. ಪ್ರಸ್ತುತ ರಸ್ತೆಪೂರ್ತಿ ಹದಗೆಟ್ಟಿರುವುದರಿಂದ ವಾಹನ ಗಳು ಹೊಂಡ ತಪ್ಪಿಸುವ ಸಲುವಾಗಿ ವಿರುದ್ಧ ಧಿಕ್ಕಿನಲ್ಲಿ ಚಲಿಸುತ್ತವೆ. ವಿರುದ್ಧ ಧಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ಮುಂದಿನಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ವೇಗವಾಗಿ ಚಲಿಸುತ್ತವೆ. ಅದೇ ಸಂದರ್ಭದಲ್ಲಿ ಮುಂದಿನಿಂದ ವಾಹನ ಬಂದರೆ ಆ ಸಂದರ್ಭದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ.
Related Articles
ರಸ್ತೆಗೆ ತೇಪ ಕಾರ್ಯ ನಡೆದರೂ ಮತ್ತೆ ಒಂದು ತಿಂಗಳೊಳಗೆ ಹೊಂಡಗುಂಡಿಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅಳಪೆ ತಿರುವಿನಲ್ಲಿ ಹೊಂಡಗಳಿಗೆ ಮುಕ್ತಿ ನೀಡುವ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟವರು ಯೋಚಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Advertisement
ಪಡೀಲ್ ಭಾಗದಿಂದ ಪಂಪುವೆಲ್‌ಗೆ ಬರುವ ವಾಹನಗಳಿಗೆ ಅಳಪೆ ತಿರುವಿನಲ್ಲಿ ಏರುರಸ್ತೆ ಸಿಗುತ್ತದೆ. ಈ ಸಂದರ್ಭದಲ್ಲಿ ಹೊಂಡಗಳನ್ನು ಕಂಡ ವಾಹನ ಚಾಲಕರು ತತ್‌ಕ್ಷಣ ಬ್ರೇಕ್ ಹಾಕಿದಾಗ ವಾಹನಗಳು ಬಂದ್ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಮತ್ತೆ ವಾಹನಗಳನ್ನು ಹೊಂಡದಿಂದ ಎಬ್ಬಿಸಲು ಪ್ರಯಾಸ ಪಡಬೇಕಾದ ಸ್ಥಿತಿ ಇದೆ.
ಪ್ರಸ್ತಾವನೆ ಸಲ್ಲಿಕೆಪಂಪುವೆಲ್-ಪಡೀಲ್ ಮಧ್ಯೆ ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ 28 ಕೋ.ರೂ.ವೆಚ್ಚದ ಪ್ರಸ್ತಾವನೆಯನ್ನು ಶಾಸಕ ಜೆ.ಆರ್.ಲೋಬೊ ಅವರು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಅನುದಾನ ಇನ್ನೂ ಬಿಡುಗಡೆಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಪಡೀಲ್‌ನ ಬಜಾಲ್ ಕ್ರಾಸ್‌ನಲ್ಲೂ ರಸ್ತೆಯು ವರ್ಷಪೂರ್ತಿ ಹೊಂಡದಿಂದ ಕೂಡಿರುತ್ತದೆ. ಇಲ್ಲಿಯೂ ತೇಪೆ ಹಾಕಿದರೆ ಮತ್ತೆ ಅದೇ ಸ್ಥಿತಿಗೆ ಮರಳುತ್ತದೆ. ಈ ಎರಡೂ ಕಡೆಗೂ ಕಾಂಕ್ರೀಟ್ ಕಾಮಗಾರಿ ನಡೆದರೆ ಮಾತ್ರ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ. ಎರಡು ಕಡೆ ಕಾಂಕ್ರೀಟ್
ಪಂಪುವೆಲ್-ಪಡೀಲ್ ರಸ್ತೆಯ ಅಳಪೆ ಮೇಘನಗರದಲ್ಲಿ 30 ಮೀ.ಹಾಗೂ ಬಜಾಲ್ ಕ್ರಾಸ್‌ನಲ್ಲಿ 15 ಮೀ. ಕಾಂಕ್ರೀಟ್ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. 2017-18ರ ಯೋಜನೆಯಲ್ಲಿ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
- ಬಿ.ಪ್ರಕಾಶ್,
ಸ್ಥಳೀಯ ಕಾರ್ಪೊರೇಟರ್, ಮನಪಾ