Advertisement

HC: ಸಾಲ ಬಾಕಿ ಪ್ರಕರಣ: ಜಾರಕಿಹೊಳಿ ವಿರುದ್ಧ ಸದ್ಯ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಸೂಚನೆ

09:47 PM Feb 09, 2024 | Pranav MS |

ಬೆಂಗಳೂರು: ಅಪೆಕ್ಸ್‌ ಬ್ಯಾಂಕಿನಿಂದ ಪಡೆದ 439 ಕೋಟಿ ರೂ. ಸಾಲ ಮರು ಪಾವತಿ ಮಾಡದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರಮೇಶ್‌ ಜಾರಕಿಹೊಳಿ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ರಮೇಶ್‌ ಜಾರಕಿಹೊಳಿ ಪರ ವಕೀಲರು, ಫೆ.26ರಂದು ಅರ್ಜಿದಾರರ ಮಗನ ಮದುವೆ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರಿಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ ಮಗನ ಮದುವೆಯಲ್ಲಿ ತಂದೆ ಹಾಜರಿರುವುದು ಅತ್ಯಗತ್ಯ. ಆದ ಕಾರಣ ಮುಂದಿನ ವಿಚಾರಣೆವರೆಗೆ ಪ್ರಕರಣ ಮೊದಲ ಅರ್ಜಿದಾರರಾಗಿರುವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿತು. ಆದರೆ, ಪ್ರಕರಣದ ಇತರ ಅರ್ಜಿದಾರರ ವಿರುದ್ಧ ತನಿಖೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿತು.

ಇದೇ ವೇಳೆ ಅರ್ಜಿದಾರರು ಅಪೆಕ್ಸ್‌ ಬ್ಯಾಂಕಿನಿಂದ ಪಡೆದಿರುವ ಸಾಲ ಮತ್ತು ಮರು ಪಾವತಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಣೆಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆಯೂ ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Advertisement

ಪ್ರಕರಣದ ಹಿನ್ನೆಲೆ:
ಬೆಳಗಾವಿಯ ಗೋಕಾಕದಲ್ಲಿರುವ ಸೌಭಾಗ್ಯಲಕ್ಷ್ಮಿಶುಗರ್‌ ಲಿಮಿಟೆಡ್‌ನ‌ಲ್ಲಿ ಯಂತ್ರೋಪಕರಣ ಅಳವಡಿಕೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ರಮೇಶ್‌ ಜಾರಕಿಹೊಳಿ 2013ರಿಂದ 2017ರ ಅವಧಿಯಲ್ಲಿ 439 ಕೋಟಿ ರೂ. ಸಾಲ ಪಡೆದಿದ್ದರು. ಅದನ್ನು ಮರು ಪಾವತಿ ಮಾಡಿರಲಿಲ್ಲ. ಸಾಲ ಪಡೆದಾಗ ಜಾರಕಿಹೊಳಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಿ, ವಸಂತ್‌ ಮತ್ತು ಶಂಕರ್‌ ನಿರ್ದೇಶಕರಾಗಿದ್ದರು. ಸಾಲ ಇರುವ ಸಂದರ್ಭದಲ್ಲಿ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಜಾರಕಿಹೊಳಿ ರಾಜಿನಾಮೆ ನೀಡಿದ್ದರು. ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲಾಗಿತ್ತು. ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next