ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಬರುವ ಗ್ರಾಹಕರಿಗೆ ನೆರವಾಗುವ ನೆಪದಲ್ಲಿ ಅವರ ಡೆಬಿಟ್ ಕಾರ್ಡ್ ಬದಲಿಸಿ ಪಿನ್ ನಂಬರ್ ತಿಳಿದುಕೊಂಡು ಹಣ ಡ್ರಾ ಮಾಡಿ, ಚಿನ್ನಾಭರಣ, ಮೊಬೈಲ್ ಖರೀದಿಸಿದ್ದ ವಂಚಕನೊಬ್ಬ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಯಲಹಂಕ ಅಟ್ಟೂರು ಲೇಔಟ್ ನಿವಾಸಿ ಮಲ್ಲಿನಾಥ್ ಅಂಗಡಿ (32) ಬಂಧಿತ. ಈತನಿಂದ ನಾಲ್ಕು ಚಿನ್ನದ ಸರ, ಮೂರು ಚಿನ್ನದ ಉಂಗುರ ಸೇರಿ ಒಟ್ಟು 75 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಯಲಹಂಕ 4ನೇ ಹಂತದ ನಿವಾಸಿ ಎಂ.ಜಿ.ರಾಮಕೃಷ್ಣೇಗೌಡ ಎಂಬವರಿಗೆ ಲಕ್ಷಾಂತರ ರೂ. ವಂಚಿಸಿದ್ದ. ದೂರುದಾರ ಎಂ.ಜಿ.ರಾಮಕೃಷ್ಣೇಗೌಡ (60) ನಿವೃತ್ತ ಸರ್ಕಾರಿ ನೌಕರರಾಗಿದ್ದು, 2 ತಿಂಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆದು ಡೆಬಿಡ್ ಕಾರ್ಡ್ ಪಡೆದಿದ್ದರು. ಮೇ 21ರಂದು ಯಲಹಂಕ ನ್ಯೂಟೌನ್‌ನಲ್ಲಿರುವ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ತೆರಳಿದ್ದರು. ಡೆಬಿಟ್ ಕಾರ್ಡ್ ಹೊಸದಾಗಿದ್ದರಿಂದ ಪಿನ್ ಜನರೇಟ್ ಮಾಡುವಂತೆ ಮೊಬೈಲ್‌ಗೆ ಸಂದೇಶ ಬಂದಿದೆ. ಈ ವೇಳೆ ರಾಮಕೃಷ್ಣೇಗೌಡ ಪಿನ್ ಜನರೇಟ್ ಮಾಡಲು ಪ್ರಯತ್ನಿಸುವಾಗ ಎಟಿಎಂ ಕೇಂದ್ರದ ಬಾಗಿಲ ಬಳಿ ಗಮನಿಸುತ್ತಿದ್ದ ಆರೋಪಿ, ಪಿನ್ ಜನರೇಟ್ ಮಾಡಲು ಸಹಾಯ ಮಾಡಲು ಬಂದಿದ್ದಾನೆ. ಈ ವೇಳೆ ಪಿನ್ ಜನರೇಟ್ ಮಾಡಿ 40 ಸಾವಿರ ರೂ. ಡ್ರಾ ಮಾಡಿ ದೂರುದಾರರಿಗೆ ಡೆಬಿಟ್ ಕಾರ್ಡ್ ಹಾಗೂ ಹಣವನ್ನು ಕೊಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಜೂ. 13ರಂದು ರಾಮಕೃಷ್ಣೇಗೌಡ ಮತ್ತೆ ಖಾತೆಯಿಂದ ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ತೆರಳಿದ್ದಾಗ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಬಳಿಕ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ 8.51 ಲಕ್ಷ ರೂ. ಡ್ರಾ ಆಗಿರುವುದು ಪತ್ತೆಯಾಗಿದೆ. ವಂಚನೆಯಾಗಿರುವುದು ಗೊತ್ತಾಗಿ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಟಿಎಂ ಕೇಂದ್ರದ ಸಿಸಿಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
8.15 ಲಕ್ಷ ರೂ. ಡ್ರಾ ಮಾಡಿದ್ದ ಆರೋಪಿ: ಆರೋಪಿ ಮಲ್ಲಿನಾಥ್ ಮೇ 12ರಂದು ರಾಮಕೃಷ್ಣೇಗೌಡರ ಹೊಸ ಡೆಬಿಟ್ ಕಾರ್ಡ್ ಮುಚ್ಚಿಟ್ಟುಕೊಂಡು ಅದೇ ಮಾದರಿ ಮತ್ತೂಂದು ಡೆಬಿಟ್ ಕಾರ್ಡ್ ನೀಡಿದ್ದ. ಬಳಿಕ ಹಂತ-ಹಂತವಾಗಿ ಡೆಬಿಟ್ ಕಾರ್ಡ್ ಬಳಸಿ ರಾಮಕೃಷ್ಣೇಗೌಡರ ಖಾತೆಯಲ್ಲಿದ್ದ 8.51 ಲಕ್ಷ ರೂ. ಡ್ರಾ ಮಾಡಿದ್ದ. ಈ ಪೈಕಿ 75 ಗ್ರಾಂ ಚಿನ್ನಾಭರಣ ಹಾಗೂ ಹೊಸ ಮೊಬೈಲ್ ಖರೀದಿಸಿದ್ದ ಎಂದು ಪೊಲೀಸರು ಹೇಳಿದರು.
ಪೊಲೀಸರ ಸಲಹೆ :
- ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಸಹಾಯಕ್ಕೆ ಅಪರಿಚಿತರನ್ನು ಕರೆಯದಿರಿ.
- ಎಟಿಎಂ ಮಿಷನ್‌ನಲ್ಲಿ ಪಿನ್ ದಾಖಲಿಸುವಾಗ ಅಪರಿಚಿತ ವ್ಯಕ್ತಿಗಳು ಅಕ್ಕ-ಪಕ್ಕ ನಿಂತು ಪಿನ್ ನಂಬರ್ ನೋಡುವ ಬಗ್ಗೆ ಎಚ್ಚರವಹಿಸಿ
- ಎಟಿಎಂ ಮೆಷನ್‌ನಲ್ಲಿ ಅಥವಾ ಕೇಂದ್ರ ದಲ್ಲಿ ಪಿನ್ ಕದಿಯಲು ರಹಸ್ಯ ಕ್ಯಾಮೆರಾ ಅಳವಡಿಸುವ ಸಾಧ್ಯತೆಯಿದೆ. ಹೀಗಾಗಿ ಗ್ರಾಹಕರು ಪಿನ್ ದಾಖಲಿಸುವಾಗ ಅಂಗೈ ಮುಚ್ಚಿಕೊಂಡು ಪಿನ್ ದಾಖಲಿಸಬೇಕು.